ಕಲಬುರಗಿ,ಜೂ 17 : ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ ಇದೇ ಜೂನ್ 19ರಂದು 41ನೇ ಘಟಿಕೋತ್ಸವ ನಡೆಯಲಿದೆ ಎಂದು ವಿವಿ ಉಪಕುಲಪತಿ ಪೆÇ್ರ.ದಯಾನಂದ ಅಗಸರ್ ತಿಳಿಸಿದರು.
ವಿಶ್ವವಿದ್ಯಾಲಯದ ಕೈಲಾಸ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂದು ಬೆಳಗ್ಗೆ 11.30ಕ್ಕೆ ಘಟಿಕೋತ್ಸವ ಜರುಗಲಿದೆ ಎಂದರು.
ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಹಾಗೂ ವಿವಿಯ ಸಮಕುಲಾಧಿಪತಿ ಡಾ.ಎಂ.ಸಿ.ಸುಧಾಕರ್ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಶ್ರೀವಾರಿ ಚಂದ್ರಶೇಖರ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ನುಡಿದರು.
2021-22ನೇ ಸಾಲಿನಲ್ಲಿ ಉತ್ತೀರ್ಣರಾದ 72 ವಿದ್ಯಾರ್ಥಿಗಳಿಗೆ ಒಟ್ಟು 165 ಚಿನ್ನದ ಪದಕಗಳನ್ನು ಸ್ವೀಕರಿಸಲಿದ್ದು, ಈ ಪೈಕಿ 58 ವಿದ್ಯಾರ್ಥಿನಿಯರು ಹಾಗೂ 18 ವಿದ್ಯಾರ್ಥಿಗಳು ಪದಕಗಳನ್ನು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯದ ಕುಲಸಚಿವ ಡಾ.ಶರಣಪ್ಪ ಸತ್ಯಂಪೇಟೆ, ಪೆÇ್ರ.ಲಕ್ಷ್ಮಣ ರಾಜನಾಳಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ರುಕ್ಮಿಣಿಗೆ 14 ಚಿನ್ನದ ಪದಕ
ಗುಲ್ಬರ್ಗ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ರುಕ್ಮಿಣಿ ಹಣಮಂತ್ರಾಯ ಒಟ್ಟು 14 ಚಿನ್ನದ ಪದಕಗಳನ್ನು ಸ್ವೀಕರಿಸಲಿದ್ದಾರೆ ಎಂದು ಗುಲ್ಬರ್ಗ ವಿವಿ ಮೌಲ್ಯಮಾಪನ ಕುಲಸಚಿವ ಜ್ಯೋತಿ ಧಮ್ಮ ಪ್ರಕಾಶ್ ತಿಳಿಸಿದರು.
ಇದರ ಜೊತೆಗೆ, ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅದಿತಿ ರೆಡ್ಡಿ ಸಂಜೀವ್ ರೆಡ್ಡಿ ಮೊಡಸೆ 9 ಚಿನ್ನದ ಪದಕ, ಎಂಬಿಎ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಪ್ರಿಯಾಂಕಾ ವೀರಭದ್ರಪ್ಪ ಗಾದಗಿಕರ್ 8 ಚಿನ್ನದ ಪದಕ, ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಬಿ.ರಾಜಶ್ರೀ ಪಿ.ಜೋಶಿ 7 ಚಿನ್ನದ ಪದಕ, ರಾಜ್ಯಶಾಸ್ತ್ರ ವಿಭಾಗದ ಲಕ್ಷ್ಮಿ ಲಕ್ಷ್ಮಣ ಹಾಗೂ ಸಮಾಜ ಕಾರ್ಯ ವಿಭಾಗದ ಅಂಬಿಕಾ ಶಿವಾನಂದ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಅಮೀನಾ ಅಂಜುಂ ಅವರು ತಲಾ 6 ಚಿನ್ನದ ಪದಕಗಳನ್ನು ಪಡೆದಿದ್ದಾರೆ ಎಂದು ವಿವರಿಸಿದರು.
ಜೊತೆಗೆ, ರಸಾಯನಶಾಸ್ತ್ರ ವಿಭಾಗದ ಶ್ರಾವಣಿ ಕೃಷ್ಣಾರೆಡ್ಡಿ, ಜೀವರಸಾಯನಶಾಸ್ರ್ತ ವಿಭಾಗದ ಅಕ್ಕಮಹಾದೇವಿ ಹಾಗೂ ಕಲಬುರಗಿಯ ಗುರುಕುಲ ಪದವಿ ಮಹಾವಿದ್ಯಾಲಯದ ಬಿಕಾಂ ವಿದ್ಯಾರ್ಥಿನಿ ಭಾಗ್ಯವಂತಿ ತಲಾ 5 ಚಿನ್ನದ ಪದಕಗಳನ್ನು ಸ್ವೀಕರಿಸಲಿದ್ದಾರೆ ಎಂದರು.
ವಿವಿಧ ನಿಕಾಯಗಳಲ್ಲಿ ಒಟ್ಟು 129 ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿ ಪ್ರಧಾನ ಮಾಡಲಾಗುತ್ತಿದ್ದು, ಈ ಪೈಕಿ ಕಲಾ ನಿಕಾಯದಲ್ಲಿ 35, ಸಮಾಜ ವಿಜ್ಞಾನ ನಿಕಾಯದಲ್ಲಿ 44, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ 31, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದಲ್ಲಿ 12, ಶಿಕ್ಷಣ ನಿಕಾಯದಲ್ಲಿ 4 ಹಾಗೂ ಕಾನೂನು ನಿಕಾಯದಲ್ಲಿ 3 ಸಂಶೋಧನಾರ್ಥಿಗಳಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.
ಮೂವರಿಗೆ ಗೌರವ ಡಾಕ್ಟರೇಟ್
ಗುಲ್ಬರ್ಗ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಈ ಬಾರಿ ವಿವಿಧ ಕ್ಷೇತ್ರಗಳ ಮೂವರು ತಜ್ಞರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಉಪಕುಲಪತಿ ಪೆÇ್ರ.ದಯಾನಂದ ಅಗಸರ್ ತಿಳಿಸಿದರು.
ಶಿಲ್ಪಕಲಾ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಲಬುರಗಿ ಜಿಲ್ಲೆಯ ನಾಡೋಜ ಮಾನಯ್ಯ ನಾಗಣ್ಣ ಬಡಿಗೇರ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಬೀದರ್ ಜಿಲ್ಲೆಯ ತಾತ್ಯಾರಾವ್ ಕಾಂಬ್ಳೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಖ್ಯಾತನಾಮರಾಗಿರುವ ಬೆಂಗಳೂರಿನ ಶ್ರೀನಾಥ್ ಎನ್.ಎಸ್. ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಲಾಗಿದೆ ಎಂದರು.