ನಾಡು-ನುಡಿ ಸೇವೆಯೇ ನಮ್ಮ ಉದ್ದೇಶ: ಡಾ. ಗೋಗೇರಿ

ಲಕ್ಷ್ಮೇಶ್ವರ,ಮಾ27: `ಕನ್ನಡ ನಾಡು-ನುಡಿಯ ಸೇವೆ ಮಾಡುವದೇ ಮುಖ್ಯ ಉದ್ದೇಶ ಇಟ್ಟುಕೊಂಡು ಎರಡನೇ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣು ಗೋಗೇರಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಕಸಾಪ ಅಜೀವ ಸದಸ್ಯರನ್ನು ಭೇಟಿ ಮಾಡಿದ ಅವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾತ್ಯಾತೀವಾಗಿ, ಪಕ್ಷಾತೀತವಾಗಿ ಮತ್ತು ಧರ್ಮಾತೀತವಾಗಿ ಸಾಹಿತ್ಯ ಮತ್ತು ಸಂಸ್ಕøತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದೇನೆ. ಜಿಲ್ಲೆಯಲ್ಲಿ ತಾಲ್ಲೂಕಿಗೊಂದು ಸಾಹಿತ್ಯ ಭವನ ನಿರ್ಮಿಸುವ ಗುರಿ ಇದ್ದು ಈಗಾಗಲೇ ಲಕ್ಷ್ಮೇಶ್ವರ, ಮುಂಡರಗಿ, ನರಗುಂದಗಳಲ್ಲಿ ಸಾಹಿತ್ಯ ಭವನದ ನಿರ್ಮಾಣ ಕೆಲಸ ನಡೆದಿದೆ. ಅದರಂತೆ ಗಜೇಂದ್ರಗಡ ಮತ್ತು ಶಿರಹಟ್ಟಿಗಳಲ್ಲೂ ಭವನ ನಿರ್ಮಿಸಲು ಜಾಗೆ ದೊರೆತಿದೆ. ಎರಡು ಜಿಲ್ಲಾ ಸಮ್ಮೇಳನ ಮತ್ತು ಆರು ತಾಲ್ಲೂಕು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು ಇದರಲ್ಲಿ ಜಿಲ್ಲೆಯ ನೂರಾರು ಸಾಹಿತಿಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದೇನೆ ಎಂದರು.
ಹಿರಿಯ ಸಾಹಿತಿಗಳಾದ ಸಿ.ಜಿ. ಹಿರೇಮಠ, ಪೂರ್ಣಾಜಿ ಖರಾಟೆ, ಎಸ್.ವಿ. ಕಮ್ಮಾರ ಮಾತನಾಡಿ ಗೋಗೇರಿ ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ಅನೇಕ ಸಾಹಿತ್ಯಕ ಕಾರ್ಯಕ್ರಮಗಳು ನಡೆದಿವೆ. ಅವರು ಜಾತ್ಯಾತೀತವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಬಾರಿ ಅವರ ಗೆಲುವು ನಿಶ್ಚಿತ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷೆ ಡಾ.ಜಯಶ್ರೀ ಹೊಸಮನಿ, ಶಿರಹಟ್ಟಿ ಕಸಾಪ ಡಿ.ಎಚ್. ಪಾಟೀಲ, ಅಂದಾನಪ್ಪ ವಿಭೂತಿ, ವಿ.ಎಂ. ಹಿರೇಮಠ, ಶರಣಬಸವ ಕೊಟಗಿ, ಮಲ್ಲಿಕಾರ್ಜುನ ಹೊಸಮನಿ, ನಿವೃತ್ತ ಶಿಕ್ಷಕ ಬಿ.ಎಸ್. ಈಳಿಗೇರ, ಎಂ.ಎನ್ ಸಾತಪುತೆ, ಜಿ.ಡಿ. ಕಲ್ಲಣ್ಣವರ, ಸೋಮಣ್ಣ ಕೆರಿಮನಿ, ನಾಗರಾಜ ಕಳಸಾಪುರ ಇದ್ದರು.