ನಾಡು-ನುಡಿ ರಕ್ಷಣೆಗಾಗಿ ಹೋರಾಟ: ಚಂದ್ರಪ್ಪ

ತುಮಕೂರು, ಜ. ೮- ನಗರದ ಹೊಯ್ಸಳ ಪಾರ್ಟಿಹಾಲ್‌ನಲ್ಲಿ ಜಿಲ್ಲಾ ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ಕನ್ನಡ ರಾಜ್ಯೋತ್ಸವ, ಸುಗ್ಗಿ ಹಬ್ಬ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ, ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಸ್ಥಾಪಿತವಾಗಿರುವ ಈ ಸಂಘಟನೆ ಜನರ ಮತ್ತು ಸಮುದಾಯದ ಏಳ್ಗೆಗಾಗಿ ಹೋರಾಡಲಿದೆ. ಕಾರ್ಯಕ್ರಮದ ದಿನ ಭುವನೇಶ್ವರಿಯ ಭಾವಚಿತ್ರವನ್ನು ಬಟವಾಡಿಯಿಂದ ಕಾರ್ಯಕ್ರಮದ ಸ್ಥಳಕ್ಕೆ ಕಲಾ ತಂಡಗಳೊಂದಿಗೆ ಮೆರವಣಿಗೆಯ ಮೂಲಕ ಕರೆತರಲಾಗುವುದು ಎಂದರು.
ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಮುಖಂಡ ಕುಮಾರಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಕನ್ನಡ ನಾಡು, ನುಡಿ ಮತ್ತು ಜಲಕ್ಕಾಗಿ ಹೋರಾಡಲು ಇಂತಹ ಸಂಘಟನೆಗಳೇ ಪ್ರಮುಖವಾಗುತ್ತವೆ. ಆದ್ದರಿಂದ ಯುವಕರು ಹೆಚ್ಚು ಹೆಚ್ಚಾಗಿ ಇಂತಹ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಹೋರಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯದರ್ಶಿ ಯೋಗೀಶ್ ಬಾಬು, ತುಮಕೂರು ಜಿಲ್ಲಾಧ್ಯಕ್ಷ ಉಮಾಶಂಕರ್, ನಗರ ಅಧ್ಯಕ್ಷ ಸಚಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಆಟೋ ಘಟಕದ ಅಧ್ಯಕ್ಷ ನಾಗೇಂದ್ರಪ್ಪ, ತಿಪಟೂರು ಘಟಕದ ಅಧ್ಯಕ್ಷ ಬಿ.ಟಿ.ಕುಮಾರ್, ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ನೀಲಕಂಠೇಗೌಡ, ಯುವ ಘಟಕದ ಜಿಲ್ಲಾಧ್ಯಕ್ಷ ಶ್ರೀಧರ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಮೊಹಿದ್ದೀನ್, ಪಾವಗಡ ಘಟಕದ ವೆಂಕಿ, ಸುಮಂತ್, ಜಾನ್, ತುರುವೇಕೆರೆ ಘಟಕದ ವೆಂಕಟೇಶ್, ತುಮಕೂರು ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕೊರಟಗೆರೆಯ ಮಂಜುನಾಥ್‌ರವರನ್ನು ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.