ನಾಡು ನುಡಿ ಭಾಷೆಯ ರಕ್ಷಣೆ ನಮ್ಮೆಲ್ಲರ ಹೊಣೆ


ಬ್ಯಾಡಗಿ,ಫೆ.24: ಆಂಗ್ಲ ಭಾಷೆಯ ಒತ್ತಡ ಮತ್ತು ವ್ಯಾಮೋಹ ನಮ್ಮ ಮಾತೃ ಭಾಷೆಯನ್ನು ನುಂಗುವಂತಾಗಿದ್ದು, ಇಂಗ್ಲಿಷ್ ವ್ಯಾಮೋಹದಲ್ಲಿ ಕನ್ನಡತನವನ್ನು ಮರೆಯದೇ ಕನ್ನಡ ಭಾಷೆಗೆ ಯಾವುದೇ ತೊಂದರೆಗೆ ಒಳಗಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಾಗಿದೆ ಎಂದು ಹಿರಿಯ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕವಿ ಸತೀಶ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ 19ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಭರಾಟೆಯಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿ ಮಾತೃ ಭಾಷೆ ಕನ್ನಡ ಉಳಿಸಲು ಸಂಘರ್ಷ ಮಾಡುವ ಅನಿವಾರ್ಯ ಸ್ಥಿತಿ ಎದುರಾಗಿದೆ. ರನ್ನ-ಪಂಪನಿಂದ ಹಿಡಿದು ಈಗಿನ ಆಧುನಿಕ ಕವಿಗಳೆಲ್ಲರೂ ಕನ್ನಡವನ್ನು ಬೆಳೆಸಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚೆಗೆ ಕನ್ನಡ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರೂ ಕಡಿಮೆಯಾಗುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣದವರೆಗಾದರೂ ಕಡ್ಡಾಯವಾಗಿ ಕನ್ನಡ ಕಲಿಯುವಂತಾಗಬೇಕು.ನಾಡು ನುಡಿ ಭಾಷೆಯ ರಕ್ಷಣೆ ಹಾಗೂ ಅಭಿವೃದ್ಧಿ ನಮ್ಮೆಲ್ಲರ ಹೊಣೆ ಎಂದರು.
ಸಾಹಿತಿ ಪ್ರಕಾಶ ಮನ್ನಂಗಿ ಮಾತನಾಡಿ ಕನ್ನಡ ಭಾಷೆ ಬಹಳ ಸರಳ ಸುಂದರ ಭಾಷೆಯಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಕನ್ನಡ ಕಡಿಮೆಯಾಗುತ್ತಲಿದೆ. ನಾವು ಪುಸ್ತಕ ಓದುವುದನ್ನು ಮರೆತಿದ್ದೇವೆ. ಸಾಹಿತ್ಯ ಬೆಳೆಸುವಲ್ಲಿ ಹಿಂದೆ ಬಿದ್ದಿದ್ದು, ಕನ್ನಡದ ಬಗ್ಗೆ ನಿರ್ಲಕ್ಷ್ಯ ಭಾವ ಮೂಡಿದೆ. ಅದಕ್ಕಾಗಿ ಮಕ್ಕಳಿಗೆ ಕನ್ನಡ ಸಾಹಿತ್ಯ ಓದುವಂತೆ ಪ್ರೇರೇಪಿಸುವ ಜೊತೆಗೆ ಅವರೊಂದಿಗೆ ಮನೆಯಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಸತೀಶ ಕುಲಕರ್ಣಿ, ಪ್ರಕಾಶ್ ಮನ್ನಂಗಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಶೆಂಭುಲಿಂಗಪ್ಪ ಅಂಗಡಿ ವಹಿಸಿದ್ದರು. ವೇದಿಕೆಯಲ್ಲಿ ಚಂದ್ರಶೇಖರಯ್ಯ ಅಲದಗೇರಿ, ಉಪಾಧ್ಯಕ್ಷ ಮಾಲತೇಶ ಅರಳಿಮಟ್ಟಿ, ಶಿವಣ್ಣ ಬಣಕಾರ. ಶಿವಣ್ಣ ಶೆಟ್ಟರ ಮುಖ್ಯ ಶಿಕ್ಷಕಿ ಶ್ರೀದೇವಿ, ಮಮತಾ ಮಡಿವಾಳರ, ಲಕ್ಷ್ಮಿ ಶೆಟ್ಟಿ, ಶ್ವೇತಾ ಅಂಗಡಿ ಸೇರಿದಂತೆ ಇತರರಿದ್ದರು.