ನಾಡು, ನುಡಿ ಉಳಿವಿಗೆ ಆತ್ಮಾವಲೋಕನ ಅಗತ್ಯ-ಬಳ್ಳಾರಿ

ಬ್ಯಾಡಗಿ, ನ 2- ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ, ವರ್ಷಪೂರ್ತಿ ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ಎಸ್’ಜೆಜೆಎಂ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತದ ವತಿಯಿಂದ ಏರ್ಪಡಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಭಾಷೆಯ ಶಿಕ್ಷಣ ಕಡ್ಡಾಯವಾಗಿ ಪಾಲಿಸಬೇಕು. ಅನ್ಯಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡತನವನ್ನು ಯಾರೂ ಮರೆಯಬಾರದು. ಜಾಗತೀಕರಣದ ಪ್ರಭಾವ ಭಾಷೆಯ ಮೇಲೆ ಬೀರಿದ್ದು, ಕನ್ನಡ ನಾಡು ನುಡಿಯ ಉಳಿವಿಗಾಗಿ ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ತಹಶೀಲ್ದಾರ ರವಿಕುಮಾರ ಕೊರವರ, ರಾಷ್ಟ್ರಕವಿ ಕುವೆಂಪು ಅವರು ತಿಳಿಸಿದಂತೆ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ನಾವು ಕನ್ನಡಿಗರು, ಕನ್ನಡವೇ ನಮ್ಮ ಮಾತೃ ಭಾಷೆ ಎಂಬ ಸತ್ಯವನ್ನು ಎಂದಿಗೂ ನಾವು ಮರೆಯಬಾರದು. ನಮ್ಮ ಮಾತೃ ಭಾಷೆ ಬಗ್ಗೆ ಅಪಾರ ಪ್ರೀತಿ, ಗೌರವ, ಅಭಿಮಾನವನ್ನು ತೋರಿಸುವ ಮೂಲಕ ಕನ್ನಡತನವನ್ನು ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಪುರಸಭಾ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಶಿವರಾಜ ಅಂಗಡಿ, ವಿನಯ ಹಿರೇಮಠ, ಫಕ್ಕೀರಮ್ಮ ಚಲುವಾದಿ, ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ, ಸುರೇಶ ಆಸಾದಿ, ವಿ.ಎಸ್. ಹೊಮ್ಮರಡಿ, ಎಸ್.ಎನ್. ಯಮುನಕ್ಕನವರ, ಮಂಜುನಾಥ ಭೋವಿ ಸೇರಿದಂತೆ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.