ನಾಡು, ನುಡಿಯ ಬಗ್ಗೆ ಅಭಿಮಾನ ಅಗತ್ಯ

ಶಹಾಬಾದ್ :ನ.2:ಪ್ರತಿಯೊಬ್ಬರಲ್ಲೂ ಕನ್ನಡ ನಾಡು ನುಡಿ ಮಣ್ಣಿನ ಬಗ್ಗೆ ಅಭಿಮಾನ ಇದ್ದಾಗ ಮಾತ್ರ ಕರ್ನಾಟಕ ರಾಜ್ಯವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಶಂಕರ ಸೋಮಯಾಜಿ ಹೇಳಿದರು.
ಅವರು ನಗರದ ಶ್ರೀಮತಿ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಶಾಲೆಯಲ್ಲಿ ನೃಪತುಂಗ ಸಾಹಿತ್ಯ ಸಾಂಸ್ಕøತಿಕ ವೇದಿಕೆ ಹಾಗೂ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ನಮ್ಮ ಮಕ್ಕಳನ್ನು ಕನ್ನಡದ ಉತ್ತರಾಧಿಕಾರಿಗಳನ್ನಾಗಿ ಮಾಡುವಲ್ಲಿ ಮೀನಮೇಷ ಎಣಿಸುತ್ತಿದ್ದೇವೆ. ಕನ್ನಡ ಭಾಷೆಗೆ 2000 ವರ್ಷದ ಇತಿಹಾಸಿ ಹೊಂದಿದೆ. 8 ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಕಾವೇರಿಯಿಂದ ಗೋದಾವರಿಯವರೆಗೂ ನಮ್ಮ ಕನ್ನಡ ನಾಡು ಪಸರಿಸಿ ಕನ್ನಡ ನಾಡಿನ ವೈಭವವನ್ನು ಇಡೀ ವಿಶ್ವಕ್ಕೆ ತೋರಿಸುತ್ತಿದೆ. ಮಲಗಿರುವ ವ್ಯಕ್ತಿಗಳನ್ನು ಎಬ್ಬಿಸುವ ಶಕ್ತಿ ಕನ್ನಡ ಅಕ್ಷರಗಳಿಗಿವೆ. ಅದುವೇ ನಮ್ಮ ಕನ್ನಡ, ಅದುವೇ ನಮ್ಮ ಭಾಷೆ, ಕನ್ನಡ ರಾಜ್ಯೋತ್ಸವ ದೀಪ ಹಚ್ಚುವ ಮೂಲಕ ಪ್ರತಿ ಗ್ರಾಮ, ಪ್ರತಿ ನಗರದಲ್ಲಿ ಕನ್ನಡ ಕ್ರಾಂತಿ ಮೊಳಗಿಸುವ ಹೊಣೆಗಾರಿಕೆಯು ಯುವಕರ ಮೇಲಿದೆ ಎಂದರು.
ಕನ್ನಡದ ಹಿರಿಯ ಶಿಕ್ಷಕರಾದ ಸಿದ್ಧಲಿಂಗಯ್ಯ ಹಿರೇಮಠ ಅವರು ಮಾತನಾಡುತ್ತ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಇಂಗ್ಲಿಷ ಭಾಷೆ ಹುಟ್ಟುವ ಮುನ್ನವೇ ಹುಟ್ಟಿದ ಭಾಷೆ ಕನ್ನಡವಾಗಿದ್ದು, ಮನಸ್ಸನ್ನು ಆನಂದಗೊಳಿಸುವಂತಹ ಅಮೃತ ಸಮಾನವಾದ ಶಕ್ತಿ ಅದಕ್ಕಿದೆ ಎಂದು ಹೇಳಿದರು.
ಪತ್ರಕರ್ತ ಲೋಹಿತ ಕಟ್ಟಿ ಮಾತನಾಡುತ್ತ, ಕನ್ನಡ ಭಾಷೆಯು ಅನ್ನದ ಭಾಷೆಯಾಗಬೇಕು ಅಂದಾಗ ಕನ್ನಡ ಭಾಷೆಯು ಮತ್ತಷ್ಟು ಬೆಳೆಯುತ್ತದೆ. ಕನ್ನಡ ಹಬ್ಬವನ್ನು ಒಂದು ದಿನ ಆಚರಣೆ ಮಾಡದೆ ನಾಡು ನುಡಿಯ ಬಗ್ಗೆ ಚಿಂತನೆ ನಡೆಸಿ ಜಾತಿ ಧರ್ಮಗಳನ್ನು ಬದಿಗೊತ್ತಿ ಇಲ್ಲಿ ವಾಸಿಸುವ ಎಲ್ಲರೂ ಒಂದೇ ಎಂಬ ಭಾವನೆಯಿಂದ ಕನ್ನಡ ಜನಾಂಗವನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.
ಎನ್‍ಸಿ ಇಂಗಿನಶೆಟ್ಟಿ ಶಾಲೆಯ ಮುಖ್ಯಗುರು ಸಂಗೀತಾ ದೇವರಮನಿ ಅಧ್ಯಕ್ಷತೆ ವಹಿಸಿದರು. ನಂದಗೋಕುಲ ಶಾಲೆಯ ಮುಖ್ಯಗುರು ಅಂಬಿಕಾ ಜಿಂಗಾಡೆ, ನೃಪತುಂಗ ವೇದಿಕೆ ಸಂಚಾಲಕ ವಾಸುದೇವ ಚವ್ಹಾಣ್ ವೇದಿಕೆಯಲ್ಲಿದ್ದರು. ಕಾಳಿಕಾ ನಿರೂಪಿಸಿದರು. ಸವಿತಾ ಬೆಳಗುಂಪಿ ಸ್ವಾಗತಿಸಿದರು, ಆರತಿ ವೆಂಕಟೇಶ ವಂದಿಸಿದರು.