
ಕಲಬುರಗಿ: ಆ.20: ರಾಜಕೀಯ ಮುತ್ಸದಿ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಅವರು ನಾಡು ಕಂಡ ಅಪ್ರತಿಮ ನಾಯಕರಾಗಿದ್ದರು ಎಂದು ಹಿರಿಯ ಚಿಂತಕ ಮತ್ತು ಸಾಹಿತಿ ಪ್ರೊ. ಆರ್.ಕೆ. ಹುಡಗಿ ಅವರು ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ರವಿವಾರ ಡಿ.ದೇವರಾಜ ಅರಸ್ ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ದೇವರಾಜ ಅರಸ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕರ್ನಾಟಕ ರಾಜ್ಯದ ಏಳಿಗೆಗೆ ನೇರ ಮತ್ತು ನಿರಂತರವಾದ ಜನಪರ ಕೆಲಸಗಳನ್ನು ಮಾಡಿದ್ದರು. ಬಡವರು ಹಿಂದುಳಿದ ವರ್ಗಗಳ ಶೋಷಿತರ ಹಿತಕ್ಕಾಗಿ ಹಗಲಿರುಳು ಶ್ರಮಿಸಿದರು. ಉತ್ತಮ ರಾಜಕೀಯ ಪ್ರಜ್ಞೆ, ಉತ್ತಮ ಆಡಳಿತ ಹಾಗೂ ಉತ್ತಮ ದೂರದೃಷ್ಟಿವುಳ್ಳವಾಗಿ ಭೂಸುಧಾರಣೆಗಳು. ಸಂಪನ್ಮೂಲಗಳ ಸಮಾನ ಹಂಚಿಕೆ ಮತ್ತು ಹಿಂದೂಳಿದ ವರ್ಗಗಳು ಮತ್ತು ಅಂಚಿನಲ್ಲಿರುವ ಸಮುದಾಯಗಳ ಸಬಲಿಕರಣಕ್ಕಾಗಿ ದುಡಿದವರು. ಸಮಾಜದ ಎಲ್ಲಾ ವರ್ಗಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದರು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಿಂದುಳಿದವರಿಗೆ ಕೈಗೆಟಕುವ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸಿದರು. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ಪ್ರಪ್ರಥಮವಾಗಿ ಹಾಸ್ಟೆಲ್‍ಗಳನ್ನು ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಅನುಕೂಲವಾಗಲೆಂದು ವಿದ್ಯಾರ್ಥಿ ವೇತನವನ್ನು ಕೊಡಲು ಆರಂಭಿಸಿದರು ಎಂದು ಅನೇಕ ವಿಚಾರಗಳನ್ನು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವ್ಹಿ.ಶಿವಾನಂದನ್ ಮಾತನಾಡಿ, ದೇವರಾಜ ಅರಸ್ ಅವರು ದೂರದೃಷ್ಟಿ ನಾಯಕರಾಗಿದ್ದರು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಹೋರಾಡಿದರು. ಬಡವರ, ದೀನ ದಲಿತರ ಧ್ವನಿಯಾಗಿದ್ದರು. ಅರಸ್ ಅವರು ಒಬ್ಬ ನಿಜವಾದ ಗ್ರಾಮೀಣಾಭಿವೃದ್ಧಿಯ ಹರಿಕಾರರಾಗಿದ್ದು, ಜನತೆಯಲ್ಲಿ ಜೀವನೋಲ್ಲಾಸ ಹೆಚ್ಚಿಸಲು ಇವರು ಶ್ರಮಿಸಿದರು ಎಂದು ಹೇಳಿದರು.
ಕಾರ್ಯಕ್ರಮದ ಗೌರವ ಅಧ್ಯಕ್ಷತೆ ವಹಿಸಿದ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕರಾದ ಡಾ. ನೀಲಾಂಬಿಕಾ ಶೇರಿಕಾರ ಮಾತನಾಡಿ, ದೇವರಾಜ ಅರಸ್ ಅವರು ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ನಿಂತು, ಅವರಿಗೆ ನ್ಯಾಯವನ್ನು ಒದಗಿಸಿದವರು. ಹಿಂದುಳಿದ ವರ್ಗಗಳ ಶಿಕ್ಷಣಕ್ಕಾಗಿ ಬಹಳ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದರು. ಅವರ ಜೀವನ ಮತ್ತು ಸಾಧನೆಗಳನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸುರ ಇದ್ದರು. ಐಕ್ಯೂಎಸಿ ಸಂಯೋಜಕಿ ಡಾ.ಪುಟ್ಟಮಣಿ ದೇವಿದಾಸ ಸ್ವಾಗತಿಸಿದರು. ಡಾ.ಸೀಮಾ ಪಾಟೀಲ ಪ್ರಾರ್ಥಿಸಿದರು. ಶ್ರೀಮತಿ ದಾಕ್ಷಾಯಣಿ ಕಾಡಾದಿ ವಂದಿಸಿದರೆ, ಡಾ. ಸಬೀಹಾ ಅವರು ನಿರೂಪಿಸಿದರು.
ಮಹಾವಿದ್ಯಾಲಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿವಯವರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.