ನಾಡು,ನುಡಿ ಭಾಷೆ ಒಗ್ಗೂಡಿಸಿದ್ದರು ವೆಂಕಟರಾಮಯ್ಯ

ಕೋಲಾರ,ಏ.೨೦:ಕನ್ನಡ ನಾಡು ನುಡಿ, ಭಾಷೆಗಾಗಿ ಎಲ್ಲಾ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವಲ್ಲಿ ಸಾಹಿತಿ ವೆಂಕಟರಾಮಯ್ಯ ರವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ರೋಟರಿ ಮಾಜಿ ಅಧ್ಯಕ್ಷ ಹೆಚ್.ರಾಮಚಂದ್ರಪ್ಪ ಹೇಳಿದರು.
ನಗರದ ವೆಂಕಟೇಶ್ವರ ನಸಿರ್ಂಗ್ ಹೋಂನಲ್ಲಿ ಕೋಲಾರ ಜಿಲ್ಲಾ ಸಿರಿಗನ್ನಡ ವೇದಿಕೆ ವತಿಯಿಂದ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ಕನ್ನಡ ಮತ್ತು ಆಂಗ್ಲ ಭಾಷೆಯ ಸಾಹಿತಿ ವೆಂಕಟರಾಮಯ್ಯ ರವರ ನಿಧನಕ್ಕೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಅವರ ಮನಸ್ಸು ಹಾತೊರೆಯುತ್ತಿತ್ತು. ಗಡಿ ಪ್ರದೇಶದಲ್ಲಿ ಕನ್ನಡದ ಕಂಪನ್ನು ಪಸರಿಸಲು ದಿಟ್ಟ ಹೆಜ್ಜೆಯನ್ನಿಟ್ಟು ಕನ್ನಡದ ಉಳಿವಿಗಾಗಿ ಶ್ರಮಸಿದ ಧೀಮಂತ ನಾಯಕ. ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರವು ಬಡವಾಗಿದೆ. ಅವರ ಸೇವಾ ಮನೋಭಾವ, ನಿಸ್ವಾರ್ಥ ಸೇವೆಯ ನಮಗೆ ಮಾದರಿಯಾಗಿದೆ. ಅವರ ಹಾದಿಯಲ್ಲಿ ನಾವು ಸಹ ಸಾಗಬೇಕೆಂದು ತಿಳಿಸಿದರು. ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಅವರು ದೇವರು ಅವರ ಕುಟುಂಬಕ್ಕ ನೋವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು.
ಸಭೆಯಲ್ಲಿ ಸಿರಿಗನ್ನಡ ವೇದಿಕೆ ಗೌರವಾಧ್ಯಕ್ಷ ಡಾ.ಕೆ.ಎಂ.ಜೆ ಮೌನಿ, ಉಪಾಧ್ಯಕ್ಷರುಗಳಾದ ಟಿ.ಸುಬ್ಬರಾಮಯ್ಯ, ಡಾ.ಮುನಿರಾಜು, ವಕೀಲ ಕೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪೋಸ್ಟ್ ನಾರಾಯಣಸ್ವಾಮಿ ಕಾರ್ಯದರ್ಶಿ ಸಿ ರವೀಂದ್ರಸಿಂಗ್, ಮಾಸ್ತೇನಹಳ್ಳಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.