ನಾಡಿನ ಪ್ರಥಮ ಹಾವುಗಳ ರಕ್ಷಕಿ ಮಹಿಳೆ ಯಾದಗಿರಿಯ ಹುಸೇನ್ ಬಿ!

ವೈಜನಾಥ ಹಿರೇಮಠ
ಯಾದಗಿರಿ:ಎ.1: ಇದು, ಹಾವು ಹಿಡಿಯುವ ಹಾವುಗಳ ರಕ್ಷಕಿ ಜಿಲ್ಲೆಯ ಮಹಿಳಾ ಇತಿಹಾಸದಲ್ಲಿಯೇ ಹಾವು ಹಿಡಿಯುವ ಪ್ರಥಮ ಮಹಿಳೆ ಹುಸೇನ್ ಬಿ! ಅವರ ಕಥೆ!
ನಗರದ ಶಶಿಧರ ಕಾಲೋನಿಯ ನಿವಾಸಿ, ಹುಸೇನ್ ಬಿ. ಗಂ. ಹುಸೇನ್ ಸಾಬ ಹಾವಗಾರ ಇವರು ಕಳೆದ 25 ವರ್ಷಗಳಿಂದ ಹಾವುಗಳ ರಕ್ಷಣೆಯ ಕಾಯಕದಲ್ಲಿ ತೊಡಗಿಕೊಂಡಿರುವ ನಾಡಿನ ಏಕೈಕ ಹಾವುಗಳ ರಕ್ಷಕ ಮಹಿಳೆ!

ಹೌದು ನಗರದಲ್ಲಿದ್ದುಕೊಂಡು ಸದ್ದಿಲ್ಲದೇ ಇತಿಹಾಸ ನಿರ್ಮಿಸಿರುವ ಹುಸೇನ್ ಬಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಾವುಗಳ ರಕ್ಷಣೆಯ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಧೈರ್ಯಶಾಲಿ ಮಹಿಳೆ!
ಯಾರದೇ ಮನೆಯಲ್ಲಿ ಹಾವು ಕಂಡುಬಂದರೂ ಈ ಮಹಿಳೆಗೆ ಕರೆ ಮಾಡಿದರೆ ಸಾಕು ಹಾಜರಾಗಿ ಹಾವು ಹಿಡಿಯುತ್ತಾರೆ.
ಈಗ್ಗೆ 40 ವರ್ಷಗಳ ಹಿಂದೆ ತಂದೆಯ ಮೋಡಿ ವಿದ್ಯೆ (ಮ್ಯಾಜಿಕ್ ಶೋ) ಮಾಡುತ್ತಿದ್ದಾಗಲೇ ಹಾವು ಮುಂಗಸಿ ಜಗಳ ತೋರಿಸುವ ದೊಂಬರಾಟದ ಮೂಲಕ ಜೀವನ ನಡೆಸುತ್ತಿದ್ದ ತಂದೆಯಿಂದ ಪ್ರೇರೇಪಿತಳಾದ ಹುಸೇನ್ ಬಿ. ಚಿಕ್ಕವಳಿದ್ದಾಗಿಂದಲೇ ಹಾವುಗಳು ಹಿಡಿಯುವುದನ್ನು ರೂಢಿಸಿಕೊಂಡರು.
ನಂತರ ಇದನ್ನೇ ಕಾಯಕವಾಗಿಸಿಕೊಂಡು ಇಲ್ಲಿಯವರೆಗೆ ಲಕ್ಷಾಂತರ ಹಾವುಗಳನ್ನು ಹಿಡಿದಿದ್ದುದು ಮಹಿಳೆಯರ ಇತಿಹಾಸದಲ್ಲಿಯೇ ಹುಸೇನ್ ಬಿ. ಹೆಸರು ಮೊದಲನೇಯದ್ದಾಗಿದೆ ಎನ್ನುತ್ತಾರೆ ನಗರದ ಹಿರಿಯರೊಬ್ಬರು.
ಕುಷ್ಟಗಿಯ ಹುಸೇನ್ ಸಾಬ ನೊಂದಿಗೆ ವಿವಾಹವಾಗಿದ್ದರೂ ತವರು ಮನೆಯಲ್ಲಿಯೇ ಉಳಿದುಕೊಂಡಿರುವ ಹುಸೇನ್ ಬಿ. ಸ್ವಾವಲಂಬಿ ಜೀವನ ನಡೆಸುತ್ತಿದ್ದು ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ಯಾರದೇ ಮನೆಯಲ್ಲಿ ಹಾವು ಕಂಡುಬಂದರೂ ಸರಿರಾತ್ರಿಯಲ್ಲಿ ದೂರವಾಣಿ ಕರೆ ಮಾಡಿದರೂ ಸಾಕು ತಕ್ಷಣ ಹಾಜರಾಗಿ ಹಾವು ಹಿಡಿದು ಅಡವಿಗೆ ಬಿಟ್ಟು ಬರುವ ಕಾಯಕದಲ್ಲಿ ತನ್ನ ಜೀವನ ಸಾರ್ಥಕತೆ ಕಂಡುಕೊಂಡಿದ್ದಾರೆ.
ಇಬ್ಬರು ಮಕ್ಕಳು ಇರುವ ಈಕೆ ಇಂದಿಗೂ ಹಾವುಗಳನ್ನು ಕಂಡರೆ ಲೀಲಾಜಾಲವಾಗಿ ಹಿಡಿದು ಅಡವಿಗೆ ಬಿಟ್ಟುಬರುವ ಕಾಯಕ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾಳೆ.
ಸುಮಾರು 11 ಸಾರಿ ಹಾವು ಕಡಿದಿದ್ದರೂ ಸಹ ದೃತಿಗೆಡದೇ ಇನ್ನಷ್ಟು ಗಟ್ಟಿಯಾಗಿ ಧೈರ್ಯದಿಂದ ಹಾವುಗಳು ಹಿಡಿಯುತ್ತಾ ಬಂದಿರುತ್ತಾಳೆ. ಕೈ ಮುಂಗೈ, ಭುಜ ಎಲ್ಲೆಂದರಲ್ಲಿ ಹಾವುಗಳ ಕಡಿದ ಗುರುತು ಇದ್ದಾಗ್ಯೂ ಸಹ ಯಾವ ಗಂಡಸರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಪಡಿಸಿರುವ ಹುಸೇನ್ ಬಿ. ಇಂದಿಗೂ ಹಾವು ಹಿಡಿಯುವುದರಲ್ಲಿ ಎತ್ತಿದ ಕೈ ಯಾಗಿದೆ.
ಇವರ ಜಂಗಮವಾಣಿ ಸಂಖ್ಯೆ: 9880074238/ 7019301360 ಸಂಪರ್ಕಿಸಿದರೆ ಹಾವು ಹಿಡಿಯಲು ಹಾಜರು.
ಇವರ ಸಾಧನೆಯನ್ನು ಹೊರಜಿಲ್ಲೆಯವರು ಗುರುತಿಸಿ ಗೌರವಿಸಿದ್ದಾರೆ. ಆದರೆ ಇದುವರೆಗೆ ಇವರನ್ನು ಜಿಲ್ಲೆಯಲ್ಲಿ ಗುರ್ತಿಸುವ ಕಾರ್ಯ ಆಗಿಲ್ಲದಿರುವುದು ಸೋಜಿಗದ ಸಂಗತಿಯಾಗಿದೆ (ಮಹಿಳಾ ದಿನಾಚರಣೆ ಈ ತಿಂಗಳ ಸಂದರ್ಭದಲ್ಲಿರುವಾಗಲಾದರೂ ಸಹ) ಸಂಬಂಧಪಟ್ಟವರು, ಸಂಘ ಸಂಸ್ಥೆಗಳವರು ಗುರುತಿಸಿ ಸನ್ಮಾನಿಸಿ ಗೌರವಿಸಬೇಕಿದೆ. ಆ ಮೂಲಕ ಸ್ತ್ರಿ ಶಕ್ತಿಯ ಧೀಶಕ್ತಿಯ ಪರಿಚಯವನ್ನು ಎಲ್ಲರಿಗೂ ಮಾಡಿಕೊಡುವ ಕೆಲಸ ಜಿಲ್ಲಾಡಳಿತ, ಜಿಲ್ಲೆಯ ಸಂಘ ಸಂಸ್ಥೆಗಳು, ಮಹಿಳಾ ಸಂಘಟನೆಗಳವರ ಜವಬ್ದಾರಿಯಾಗಿದೆ ಎಂಬುದು “ಪತ್ರಿಕೆ’ಯ ಕಳಕಳಿಯಾಗಿದೆ.