ನಾಡಿನ ಏಕೀಕರಣಕ್ಕೆ ಆಲೂರು ವೆಂಕಟರಾಯರ ಕೊಡುಗೆ ಅವಿಸ್ಮರಣೀಯ

ಕಲಬುರಗಿ:ಜು.12: ನಮ್ಮ ಕನ್ನಡ ನಾಡಿಗೆ ತನ್ನದೇ ಆದ ಭವ್ಯವಾದ ಇತಿಹಾಸ, ಪರಂಪರೆ ಇದೆ. ನಾನಾ ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ನಾಡನ್ನು, ಅಖಂಡವಾಗಿ ಏಕೀಕರಣಗೊಳಿಸಲು ನಿರಂತರವಾಗಿ ಶ್ರಮಿಸಿದ ಆಲೂರು ವೆಂಕಟರಾಯರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.

ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಜ್ಞಾನ ಚಿಗುರು ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಆಲೂರು ವೆಂಕಟರಾಯರ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

    'ಕನ್ನಡದ ಕುಲಪುರೋಹಿತ' ಎಂಬ ನಾಮಾಂಕಿತದ ಆಲೂರು ವೆಂಕಟರಾಯರು, ಕನ್ನಡ ನಾಡಿನ ಉದಯಕ್ಕೆ ನಿರಂತರವಾಗಿ ಶ್ರಮಿಸಿದ್ದಾರೆ. ಕನ್ನಡ ನೆಲದಲ್ಲಿರುವ ಎಲ್ಲರೂ ಒಂದೆಯೆಂದು ಸಾರಿ, ಪ್ರತಿಯೊಬ್ಬರಲ್ಲಿ ನಾಡಿನ ಉದಯದ ಬಗ್ಗೆ ಜಾಗೃತಿಯನ್ನು ಉಂಟುಮಾಡುವ ಮೂಲಕ ನಾಡಿನ ಹುಟ್ಟಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
   ಹೊದಲೂರ ವಲಯ ಸಿಆರ್‍ಸಿ ವೀರೇಶ ಬೋಳಶೆಟ್ಟಿ ನರೋಣಾ ಮಾತನಾಡಿ, ವೆಂಕಟರಾಯರು ಅಪ್ಪಟ ದೇಶ ಪ್ರೇಮಿ, ಕನ್ನಡಾಭಿಮಾನಿ, ಮಾನವತವಾದಿ, ಸರಳ ಜೀವಿಯಾಗಿದ್ದರು. ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಜಾಗೃತಗೊಳಿಸಿದ ಮೇರು ವ್ಯಕ್ತಿ. ಇಂತಹ ಮಹನೀಯರ ಬಗ್ಗೆ ತಿಳಿದುಕೊಂಡು ನಾಡು-ನುಡಿಯ ಸೇವೆ ಮಾಡಬೇಕು ಎಂದರು.

ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ಪ್ರಕಾಶ ಸರಸಂಬಿ, ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಸಾಗರ, ಅಮರ ಬಸವರಾಜ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.