ನಾಡಿನ ಅಪರೂಪದ ಸಾಹಿತಿ ಡಾ.ಚನ್ನಪ್ಪ ಕಟ್ಟಿ :ಡಾ.ಪಡಶೆಟ್ಟಿ

ಇಂಡಿ:ಜ.1: ಸಮಕಾಲಿನ ಸಾಹಿತ್ಯ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದವರು ಡಾ.ಚನ್ನಪ್ಪ ಕಟ್ಟಿ ಅವರಾಗಿದ್ದಾರೆ.ಅವರು ಸೃಜನಶೀಲ ಲೇಖಕರಾಗಿ, ಕತೆಗಾರರಾಗಿ,ಕವಿಗಳಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ ಈ ನಾಡಿನಲ್ಲಿ ಗಟ್ಟಿತನದ ಸಾಹಿತ್ಯವನ್ನು ಸೃಷ್ಟಿ ಮಾಡಿದವರಾಗಿದ್ದಾರೆ.ಅಂತವರು ನನ್ನ ಗೆಳೆಯರು ಎಂಬುದೇ ನನಗೆ ಒಂದು ಹೆಮ್ಮೆಯ ವಿಷಯ ಎಂದು ಜಾನಪದ ವಿದ್ವಾಂಸ
ಡಾ.ಎಂ.ಎಂ ಪಡಶೆಟ್ಟಿ ಹೇಳಿದರು.
ಅವರು ತಾಲೂಕಿನ ನಾದ ಕೆ ಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಬ್ಯಾಗ್ ಲೆಸ್ ಡೇ ಅಂಗವಾಗಿ ನಡೆದ ಬೆರಗು ಪ್ರಕಾಶನ ಕಡಣಿ ಪ್ರಕಟಿಸಿದ ಡಾ. ಚನ್ನಪ್ಪ ಕಟ್ಟಿ ಅವರ “ಚೆನ್ನುಡಿ” ಕೃತಿಯ ಅವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚನ್ನಪ್ಪ ಕಟ್ಟಿಯವರು ಸುಮಾರು ನಾಲ್ಕು ದಶಕಗಳಿಂದ ಸಿಂದಗಿಯಲ್ಲಿ ನೆಲೆ ನಿಂತು “ನೆಲೆ’ ಪ್ರಕಾಶನದ ಮೂಲಕ 90ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾರಸ್ವತ ಲೋಕಕ್ಕೆ ಕಾಣಿಕೆಯಾಗಿ ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಹಾಗೆಯೇ ಈ ನಾಡಿನಲ್ಲಿ ಅಸಂಖ್ಯಾತ ವಿದ್ಯಾರ್ಥಿ-ಶಿಕ್ಷಕ- ಪ್ರಾಧ್ಯಾಪಕ ವೃಂದವನ್ನು ಸೃಷ್ಟಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರು ತಮ್ಮ ಸಮಕಾಲೀನರಿಗೆ ಹಿರಿಯರಿಗೆ ಮತ್ತು ಕಿರಿಯರಿಗೆ ಪೆÇ್ರೀತ್ಸಾಹದಾಯಕವಾಗಿ ಕೃತಿಗಳಿಗೆ ಬರೆದ ಮುನ್ನುಡಿ ಮತ್ತು ಬೆನ್ನುಡಿಗಳ ಸಮಗ್ರ ಸಂಕಲನವೇ ಈ “ಚೆನ್ನುಡಿ’ ಎಂಬ ಕೃತಿ.ಈ ಕೃತಿಯನ್ನು ಪ್ರಕಟಿಸಿದ ಕಡಣಿಯ ಬೆರಗು ಪ್ರಕಾಶನಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು ಎಂದು ತಿಳಿಸಿದರು.
ಚೆನ್ನುಡಿ ಕೃತಿಯ ಗದ್ಯಕೃತಿಗಳಿಗೆ ಮುನ್ನುಡಿಗಳ ಕುರಿತು ಮಾತನಾಡಿದ ವಿಮರ್ಶಕ ಮನು ಪತ್ತಾರ ಅವರು, ಗದ್ಯಕೃತಿಗಳಲ್ಲಿ ಕಾವ್ಯವನ್ನು ಕಾಣುವುದು ಹಾಗೂ ಕಾವ್ಯದಲ್ಲಿ ಕಥೆ ಕಟ್ಟುವ ಶಕ್ತಿ ಕಟ್ಟಿ ಅವರಿಗೆ ಇದೆ.
ಹಾಗೆಯೇ ಈ ಭಾಗದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಮುನ್ನುಡಿ ಮತ್ತು ಬೆನ್ನುಡಿ ಬರೆದಿದ್ದು ನೋಡಿದರೆ ಅವರ ಸಹೃದಯತೆಗೆ ಸಾಕ್ಷಿ ಎಂದರು.
ಶಿಕ್ಷಕ ರಾಮಚಂದ್ರ ಬಿರಾದಾರ ಕಾವ್ಯ ಬಾಗದ ವಿಶ್ಲೇಷಣೆ ಮಾಡಿದರು. ಡಾ.ರಮೇಶ ಕತ್ತಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕರಾದ ಸಿ ಎಂ ಬಂಡಗರ ಮಾತನಾಡಿ, ಬ್ಯಾಗ್ ಲೆಸ್ ಡೇ ಅಂಗವಾಗಿ ಸಾಹಿತಿಗಳೊಂದಿಗೆ ವಿದ್ಯಾರ್ಥಿಗಳು ಸಂವಾದ ಮಾಡುವ ಮೂಲಕ ಮಕ್ಕಳಲ್ಲಿ ಒಂದು ಸಾಹಿತ್ಯಿಕ ಮನೋಭೂಮಿಕೆ ಸೃಷ್ಠಿ ಮಾಡುವುದು ಇಂದಿನ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಸಿದರಾಯ ಐರೊಡಗಿ, ಪರಶುರಾಮ ಹರಿಜನ,ಕಲಬುರ್ಗಿಯ ಸಾಹಿತಿ ಸಿ ಎಸ್ ಆನಂದ ವೇದಿಕೆ ಮೇಲಿದ್ದರು. ಐವತ್ತಕ್ಕೂ ಹೆಚ್ಚು ಜನ ಶಿಕ್ಷಕರು ಸಾರ್ವಜನಿಕರು ಮತ್ತು ಶಾಲೆಯ ಮುನ್ನೂರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳ ಹಾಗೂ ಸಾಹಿತಿಗಳ ಸಂವಾದ ಆಕರ್ಷಣೀಯ ವಾಗಿತ್ತು.