ನಾಡಿನೆಲ್ಲೆಡೆ ಸಡಗರಸಂಭ್ರಮ ವರಮಹಾಲಕ್ಷ್ಮಿ ಆಚರಣೆ

ಬೆಂಗಳೂರು, ಆ ೫- ಇಂದು ನಾಡಿನೆಲ್ಲೆಡೆ ಮಹಿಳೆಯರು ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ.

ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯ ಮೊದಲಿನ ಶುಕ್ರವಾರದಂದು ಈ ವೃತವನ್ನು ಆಚರಿಸಲಾಗುತ್ತದೆ. ಅದರಲ್ಲಿ ಚಾರುಮತಿ ಕಥೆಯನ್ನು ಪ್ರಸ್ತುತ ಜನರು ಪಾಲಿಸುತ್ತಾರೆ. ನಿನ್ನೆ ಸುರಿದ ಭಾರಿ ಮಳೆಯ ನಡುವೆಯೂ ಮಹಿಳೆಯರು ಮಾರುಕಟ್ಟೆಗಳಲ್ಲಿ ಭರ್ಜರಿ ಹೂವಿನ ವ್ಯಾಪರ ಮಾಡಿ, ಇಂದು ವರಮಹಾಲಕ್ಷ್ಮೀಯನ್ನು ಸಡಗರದಿಂದ ಬರಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಹಬ್ಬಗಳ ಸಂಭ್ರಮವನ್ನು ಹೊತ್ತು ತರುವ ಶ್ರಾವಣ ಮಾಸದಲ್ಲಿ ಅದ್ದೂರಿ ಹಬ್ಬಗಳಲ್ಲಿ ವರಮಹಾಲಕ್ಮೀ ವ್ರತವೂ ಒಂದು. ಮನೆಯ ಹೆಣ್ಣು ಮಕ್ಕಳು ಹುಮ್ಮಸ್ಸಿನಿಂದ ಏಳಿಗೆಗಾಗಿ ಲಕ್ಷ್ಮೀಯನ್ನು ಇಂದು ವಿಶೇಷವಾಗಿ ಪೂಜಿಸುತ್ತಾರೆ. ಈ ಹಬ್ಬವನ್ನು ಮುಖ್ಯವಾಗಿ ಮಹಿಳೆಯರಿಗೆಂದೇ ಸಮರ್ಪಿಸಲಾಗಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವರು ಸಹ ಒಂದೊಂದರ ಸಂಕೇತ. ಅಂತೆಯೇ ಲಕ್ಷ್ಮೀ ಸಂಪತ್ತಿನ ಸಂಕೇತ. ಹೀಗಾಗಿ ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಯನ್ನು ಇಂದು ವ್ರತಾಚರಣೆ ಮಾಡುವ ಮೂಲಕ ಪೂಜಿಸುತ್ತಾರೆ.
ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯ ಮೊದಲಿನ ಶುಕ್ರವಾರದಂದು ಈ ವೃತವನ್ನು ಆಚರಿಸಲಾಗುತ್ತದೆ. ಒಂದೊಮ್ಮೆ ಮಹಾದೇವನ ಬಳಿ ತಾಯಿ ಪಾರ್ವತಿ ಒಂದು ಪ್ರಶ್ನೆಯನ್ನು ಕೇಳುತ್ತಾರಂತೆ. ಮಹಿಳೆಯರು ತಮ್ಮ ಕುಟುಂಬದ ಸುಖ-ಸಮೃದ್ಧಿಗೆ ಏನು ಮಾಡಬೇಕು ಎಂದು. ಅದಕ್ಕೆ ಉತ್ತರವಾಗಿ ಮಹಾಶಿವನು ಚಾರುಮತಿ ಕಥೆಯಲ್ಲಿ ಹೇಳಲಾಗಿದೆ.
“ಮಗಧ ದೇಶದಲ್ಲಿದ್ದ ಚಾರುಮತಿ ಎಂಬ ಮಹಿಳೆ ಪರಿಪೂರ್ಣ ವ್ಯಕ್ತಿತ್ವ ಹೊಂದಿದವಳು. ಆಕೆ ಓರ್ವ ಪತ್ನಿಯಾಗಿ, ಸೊಸೆಯಾಗಿ ಮತ್ತು ತಾಯಿಯಾಗಿ ತನ್ನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಿದ್ದಳು. ಇನ್ನು ಆಕೆಯ ಆ ನಿಷ್ಠೆಗೆ ಪ್ರಭಾವಿತಳಾದ ಮಹಾಲಕ್ಷ್ಮೀ, ಒಂದು ದಿನ ಆಕೆಯ ಕನಸಿನಲ್ಲಿ ಬಂದು ?ಶ್ರಾವಣ ತಿಂಗಳಲ್ಲಿ ಬರುವ ಹುಣ್ಣಿಮೆಯ ಮೊದಲ ಶುಕ್ರವಾರದಂದು ನನ್ನನ್ನು ಭಕ್ತಿಪೂರ್ವಕವಾಗಿ ಪೂಜಿಸಿ. ನಿನ್ನ ಇಷಾರ್ಥಗಳನ್ನು ಈಡೇರಿಸುತ್ತೇನೆ? ಎಂದು ಹೇಳುತ್ತಾರೆ. ಅದರಂತೆಯೇ ಚಾರುಮತಿ ಬಹುಜನರ ಸಮ್ಮುಖದಲ್ಲಿ ಪೂಜೆಯನ್ನು ನೆರವೇರಿಸುತ್ತಾರೆ. ಪೂಜೆ ಮಾಡಿದ ಬಳಿಕ ಚಾರುಮತಿಯ ಮನೆ ಸಮೃದ್ಧವಾಗತೊಡಗಿತು. ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಾರೆ.
ಲಕ್ಷ್ಮೀ ಎನ್ನುವಾಕೆ ಭಾರತೀಯರ ಬದುಕಿನ ಸಮೃದ್ಧಿಯ ದೇವತೆ. ಇಲ್ಲಿ ಸಮೃದ್ಧಿ ಎನ್ನುವುದು ಹಣದ ಸುತ್ತಲೂ ಹೆಣೆದುಕೊಂಡಿರುವ ನಮ್ಮ ಕಾಲದ ಕಲ್ಪನೆಗಿಂತ ವಿಸ್ತಾರವಾದದ್ದು. ಬದುಕಿನಲ್ಲಿ ಸೌಖ್ಯವೆನ್ನುವುದು ಹಣಮಾತ್ರದಿಂದ ಒದಗುವಂಥದಲ್ಲ. ಅದು ಲೌಕಿಕ ಬದುಕಿನಲ್ಲಿ ನಮಗಿರುವ ಕರ್ತವ್ಯ ಮತ್ತು ಬಾಧ್ಯತೆಗಳನ್ನು ನೆರವೇರಿಸುವುದಕ್ಕೆ ಅನುಕೂಲವಾದ ಸ್ಥಿತಿಯನ್ನೂ ಒಳಗೊಂಡಿರುತ್ತದೆ. ಲಕ್ಷ್ಮೀ ಆ ಬಗೆಯ ಸಮೃದ್ಧಿಯ ದೇವತೆ

ರಾಹುಕಾಲ ಅಶುಭ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡಲೇಬಾರದು. ಇನ್ನು ವರಮಹಾಲಕ್ಷ್ಮಿ ವ್ರತದ ಮುಹೂರ್ತ ಮುಂಜಾನೆ ೬:೦೦ ರಿಂದ ಬೆಳಗ್ಗೆ ೮.೨೦ ರವರೆಗೆ ಇದೆ. ಇನ್ನು ಮಧ್ಯಾಹ್ನ ಮುಹೂರ್ತ ಬೆಳಗ್ಗೆ ೯.೨೦ ರಿಂದ ಬೆಳಗ್ಗೆ ೧೧.೦೫ ರವರೆಗೆ ಮತ್ತು ಬೆಳಗ್ಗೆ ೧೧.೫೪ ರಿಂದ ಮಧ್ಯಾಹ್ನ ೧೨.೩೫ ರವರೆಗೆ ಇದೆ. ಸಂಜೆ ಮುಹೂರ್ತ – ಸಂಜೆ ೬.೪೦ ರಿಂದ ಸಂಜೆ ೭.೪೦ ರವರೆಗೆ ಇದೆ. ಅಭಿಜಿತ್ ಮುಹೂರ್ತ ಶುಭವಾಗಿದ್ದು, ಬೆಳಗ್ಗೆ ೦೯:೫೩ ರಿಂದ ಬೆಳಗ್ಗೆ ೧೧:೨೯ ರವರೆಗೆ ಅಮೃತ ಕಾಲವಿದೆ.

ವರಮಹಾಲಕ್ಷ್ಮಿ ವ್ರತದ ಪ್ರಯುಕ್ತ ಮಹಿಳೆಯರು, ಮಹಾಲಕ್ಷ್ಮಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸುತ್ತಿರುವುದು.