ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಲಿವೆ ಅಭಿಮನ್ಯು ಅಂಡ್ ಟೀಂ

ಮೈಸೂರು,ಅ.28:- ವಿಶ್ವ ವಿಖ್ಯಾತ ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಿದ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಇಂದು ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಲಿವೆ.
ಇಂದು ಅರಣ್ಯ ಇಲಾಖೆಯಿಂದ ದಸರಾ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ ಆಯೋಜಿಸಲಾಗಿತ್ತು, ಗಜಪಡೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಯಶಸ್ವಿಯಾಗಿ ದಸರಾ ಮುಗಿಸಿದ ಬಳಿಕ ಇದೀಗ ಸ್ವಸ್ಥಾನಕ್ಕೆ ವಾಪಾಸ್ ಆಗುತ್ತಿವೆ. ಇಂದು ನಾಡಿನಿಂದ ಮತ್ತೆ ಕಾಡನತ್ತ ಅಭಿಮನ್ಯು ಅಂಡ್ ಟೀಮ್ ಹೆಜ್ಜೆ ಹಾಕಲಿವೆ.
ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗಿದ್ದು ಜಂಬೂ ಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಹೀಗಾಗಿ ಕ್ಯಾಪ್ಟನ್ ಅಭಿಮನ್ಯು ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ್ದ. ಈ ಬಾರಿ 400 ಮೀಟರ್ ಗಷ್ಟೇ ಜಂಬೂ ಸವಾರಿ ಮೆರವಣಿಗೆ ಸೀಮಿತವಾಗಿತ್ತು.
ಪ್ರತಿಬಾರಿಯೂ 12 ಆನೆಗಳು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದವು, ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲಾಗಿದ್ದು, ಕೇವಲ ಐದು ಆನೆಗಳನ್ನಷ್ಟೇ ಕರೆತರಲಾಗಿತ್ತು. ಅ.1ರಂದು ಮೈಸೂರು ನಗರವನ್ನು ಆನೆಗಳು ಪ್ರವೇಶಿಸಿದ್ದು, ಅರಣ್ಯಭವನದಲ್ಲಿ ತಂಗಿ, ಬಳಿಕ ಅ.2ರಂದು ಅರಮನೆಯ ಆವರಣವನ್ನು ಪ್ರವೇಶಿಸಿದ್ದವು. 54ರ ಹರೆಯದ ಅಭಿಮನ್ಯು ಅದರ ಮಾವುತ ವಸಂತ ಮತ್ತು ಕಾವಾಡಿ ರಾಜು , 47ವರ್ಷದ ವಿಕ್ರಮ ಅದರ ಮಾವುತ ಜೆ.ಕೆ.ಪುಟ್ಟ, ಕಾವಾಡಿ ಹೇಮಂತ್ ಕುಮಾರ್ , 38ವರ್ಷದ ಗೋಪಿ ಅದರ ಮಾವುತ ನಾಗರಾಜು, ಕಾವಾಡಿ ಶಿವು, 61ವರ್ಷದ ವಿಜಯ ಅದರ ಮಾವುತ ಭೋಜಪ್ಪ, ಕಾವಾಡಿ ಭರತ್ ಬಿ.ಪಿ, 42ವರ್ಷದ ಕಾವೇರಿ ಅದರ ಮಾವುತ ಜೆ.ಕೆ.ದೋಬಿ, ಕಾವಾಡಿ ರಂಜನ್ ಜೆ.ಎ ದಸರಾ ಜಂಬೂ ಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ್ದು ಕಾಡಿನತ್ತ ಹೆಜ್ಜೆ ಹಾಕುತ್ತಿವೆ.
ಈ ವೇಳೆ ಡಿಸಿಎಫ್ ಅಲೆಕ್ಸಾಂಡರ್, ಆನೆಗಳ ಮಾವುತರು, ಕಾವಾಡಿಗಳು ಉಪಸ್ಥಿತರಿದ್ದರು.