ನಾಡಿನಾದ್ಯಂತ ಶ್ರೀರಾಮ ನವಮಿ ಆಚರಣೆ

ಬೆಂಗಳೂರು,ಮಾ.೩೦-ಇಂದು ಮರ್ಯಾದಾ ಪುರುಷ ಶ್ರೀರಾಮನ ಜಯಂತಿಯನ್ನು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಬಹಳ ವಿಜೃಂಭಣೆಯಿಂದ ರಾಮನವಮಿಯನ್ನು ಆಚರಿಸಲಾಗುತ್ತದೆ.
ವಿಷ್ಣುವಿನ ೭ನೇ ಅವತಾರವಾದ ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನ ಜನ್ಮದಿನದ ನೆನಪಿಗಾಗಿ ರಾಮ ನವಮಿ ಆಚರಿಸಿಕೊಂಡು ಬರಲಾಗುತ್ತಿದೆ.
ಪ್ರತಿ ವರ್ಷ ಚೈತ್ರ ಮಾಸದ ನವಮಿ ದಿನಾಂಕವನ್ನು ಶ್ರೀರಾಮ ನವಮಿ ಎಂದು ಕರೆಯಲಾಗುತ್ತದೆ.
ರಾಮ ನವಮಿಯಂದು ಶ್ರೀರಾಮನನ್ನು ಮೆಚ್ಚಿಸಲು ಭಕ್ತರು ಹಲವು ರೀತಿಯಲ್ಲಿ ಪೂಜೆ, ಆರಾಧನೆಗಳನ್ನು ಕೈಗೊಳ್ಳುತ್ತಾರೆ. ಈ ದಿನ ರಾಮರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ ಜೀವನದ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ರಾಮರಕ್ಷಾ ಸ್ತ್ರೋತ್ರ ಪಠಣ ಕೂಡ ವಿಧಿವಿಧಾನಕ್ಕೆ ಅನುಸಾರವಾಗಿ ಇದ್ದರೆ ಅದರ ಫಲಾಫಲಗಳು ಕೂಡ ಹೆಚ್ಚಾಗಿರುತ್ತವೆ.
ಹಾಗಾಗಿ ರಾಮ ನವಮಿಯ ದಿನದಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿಕೊಂಡು, ಶ್ರೀರಾಮನ ಮೂರ್ತಿಯ ಮುಂದೆ ಕುಳಿತು ಶುದ್ಧ ತುಪ್ಪದ ದೀಪವನ್ನು ಹಚ್ಚಿ. ನಂತರ ಶ್ರೀರಾಮನಿಗೆ ಹೂವುಗಳು ಮತ್ತು ಮಾಲೆಗಳನ್ನು ಅರ್ಪಿಸಿ, ತಿಲಕವನ್ನು ಹಚ್ಚಿ ಭಕ್ತಿಯಿಂದ ಪೂಜೆ ಮಾಡಿ. ಬಳಿಕ ಕುಶಾನ ಆಸನದ ಮೇಲೆ ಕುಳಿತು ಶಾಂತ ಮನಸ್ಸಿನಿಂದ ರಾಮ ರಕ್ಷಾ ಸ್ತೋತ್ರವನ್ನು ಪಠಿಸಿ. ರಾಮ ರಕ್ಷಾ ಸ್ತೋತ್ರವನ್ನು ನೀವೇ ಪಠಿಸಲು ಸಾಧ್ಯವಾಗದಿದ್ದರೆ ಅರ್ಹ ಬ್ರಾಹ್ಮಣರ ಸಹಾಯದಿಂದ ಈ ಪಠಣವನ್ನು ಮಾಡಬಹುದು.
ಧರ್ಮಗ್ರಂಥಗಳ ಪ್ರಕಾರ, ಭಗವಾನ್ ಶ್ರೀರಾಮನ ಜನ್ಮದಿನವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯ ಒಂಬತ್ತನೆಯ ಮತ್ತು ಕೊನೆಯ ದಿನ. ಆದರೆ ಈ ವರ್ಷ ರಾಮನವಮಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ,
ಇನ್ನು ಈ ವರ್ಷ ರಾಮನವಮಿ ಗುರುವಾರ ಬಂದಿದ್ದು ಬಹಳ ವಿಶೇಷವಾಗಿದೆ. ಏಕೆಂದರೆ ಶ್ರೀರಾಮನು ಭಗವಾನ್ ವಿಷ್ಣುವಿನ ೭ ನೇ ಅವತಾರವಾಗಿದೆ. ಗುರುವಾರ ವಿಷ್ಣುವಿಗೆ ಬಹಳ ಪ್ರಿಯವಾದ ವಾರ.. ಹೀಗಿರುವಾಗ ಗುರುವಾರ ರಾಮಜನ್ಮೋತ್ಸವ ನಡೆಯುತ್ತಿರುವುದರಿಂದ ಇದರ ಮಹತ್ವ ಮತ್ತಷ್ಟು ಹೆಚ್ಚಿದೆ.
ರಾಮನವಮಿ ಪ್ರಯುಕ್ತ ಇಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ರಾಮಮಂದಿಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಶ್ರೀರಾಮನಿಗೆ ಹಲವು ಬಗೆಯ ಹೂಗಳಿಂದ ಅಲಂಕಾರಗೊಳಿಸಿ ವಿಶೇಷ ಪೂಜೆ ನೇರವೇರಿಸಲಾಯಿತು. ಭಕ್ತರು ಬೆಳಿಗ್ಗೆಯಿಂದಲೇ ರಾಮನ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.