ನಾಡಿದ್ದು ಭಗೀರಥ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಸೆ,1-  ಭಗೀರಥ ಪೀಠದ ಸುಕ್ಷೇತ್ರ ಮಧುರೆ ಹೊಸದುರ್ಗದಲ್ಲಿ ಸೆ.3ರಂದು  ರಾಜ್ಯ ಮಟ್ಟದ ದ್ವಿತೀಯ ಪಿಯುಸಿ, ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಭಗೀರಥ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಂಡಿದೆ.
ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಳ್ಳಾರಿ ಜಿಲ್ಲಾ ಶ್ರೀ ಭಗೀರಥ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಹನುಮೇಶ್ ಉಪ್ಪಾರ್ ತಿಳಿಸಿದರು
ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರದ ಜೊತೆ  ಸಚಿವರು, ಶಾಸಕರಿಗೆ ಹಾಗೂ ಹಿರಿಯ,  ನಿವೃತ್ತಿ ಪಡೆದ ಅಧಿಕಾರಿಗಳಿಗೆ, ವಿಶೇಷ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 
ಭಗೀರಥ ಮಹಾ ಸಂಸ್ಥಾನದ ಶ್ರೀಡಾ.ಪುರುಷೋತ್ತಮಾನಂದಪುರಿ ಮಹಾ ಸ್ವಾಮೀಜಿ ಅವರು ಸಮಾರಂಭದ ಸಾನಿದ್ಯ ವಹಿಸಲಿದ್ದಾರೆ. ಶಾಸಕರು ಹಾಗೂ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಸಿ.ಪುಟ್ಟರಂಗ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭೆ ಸಭಾಪತಿ ಯು.ಟಿ.ಖಾದರ್ ಅವರು ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಸಚಿವ ಡಿ.ಸುಧಾಕರ್  ಶ್ರೀ ಭಗೀರಥ ಮಹರ್ಷಿ ಭಾವಚಿತ್ರವನ್ನು ಅನಾವರಣಗೊಳಿಸಲಿದ್ದಾರೆ.
ವಿಶೇಷ ಸಾಧಕರಿಗೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರು ಸನ್ಮಾನಿಸಲಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ, ಪದವಿ ಉನ್ನತ ವ್ಯಾಸಂಗದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸನ್ಮಾನಿಸಲಿದ್ದಾರೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಲಿದ್ದು.  ಶಿಕ್ಷಣ ಸಚಿವ ಮಧು ಬಂಗಾರಪ್ಪ ನಿವೃತ್ತ ಅಧಿಕಾರಿಗಳಿಗೆ ಸನ್ಮಾನಿಸಲಿದ್ದಾರೆ.
ಈ ಸಮಾರಂಭಕ್ಕೆ ಉಪ್ಪಾರ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
 ಈ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷ ಬಸವರಾಜ್, ಹಿರಿಯ ಮುಖಂಡ ಯು.ಉರಕುಂದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರಗೇಶ್ ಉಪ್ಪಾರ, ತಾಲೂಕು ಅಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ, ನಗರ ಅಧ್ಯಕ್ಷ ಶ್ರೀರಾಮುಲು, ಗೌರವ ಅಧ್ಯಕ್ಷರಾದ ನೀಲಕಂಠಪ್ಪ, ಮಲ್ಲಪ್ಪ, ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ ಊಳೂರು, ನೌಕರರ ಸಂಘದ ಅಧ್ಯಕ್ಷ ನಾಗರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.