ನಾಡಿದ್ದರಿಂದ ಜಿಲ್ಲೆಯ 19432 ಆರೋಗ್ಯ ಸೇವಾ ಸಿಬ್ಬಂದಿಗೆ ಕೋವಿಡ್ ಲಸಿಕೆ: ಮಾಲಪಾಟಿ

????????????????????????????????????

ಬಳ್ಳಾರಿ,ಜ.14: ಕೋವಿಡ್ ಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತವು ಸಕಲ ಸಿದ್ಧತೆ ಕೈಗೊಂಡಿದೆ. ಜಿಲ್ಲೆಯಲ್ಲಿ ಮೊದಲ ಸುತ್ತಿನಲ್ಲಿ 145 ಲಸಿಕಾ ಕೇಂದ್ರಗಳ ಮೂಲಕ 19432 ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಲು ನಿರ್ಧರಿಸಲಾಗಿದ್ದು, 1990 ಕೋವಿಸಿಲ್ಡ್ ಲಸಿಕೆ ಬಳ್ಳಾರಿಗೆ ಬರಲಿದೆ, ನಾಡಿದ್ದು ಜ 16 ರಿಂದ ಲಸಿಕೆ ನೀಡಲಿದೆಂದು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಹೇಳಿದ್ದಾರೆ.
ಕೋವಿಡ್ ವ್ಯಾಕ್ಸಿನೇಷನ್ ಪೂರ್ವಸಿದ್ಧತೆ ಹಾಗೂ ಆರೋಗ್ಯ ಕಾರ್ಯಕರ್ತರು ಹಾಗೂ ಮಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ವ್ಯಾಕ್ಸಿನೇಷನ್ ನೀಡುವುದಕ್ಕೆ ಸಂಬಂಧಿಸಿದಂತೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ನಿನ್ನೆ ಸಂಜೆ ನಡೆಸಿದ ವಿಡಿಯೋ ಕಾನ್ಪರೆನ್ಸ್ ನಂತರ ಅವರು ಜಿಲ್ಲೆಯ ಆರೋಗ್ಯ,ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಜ 16ರಂದು ಬೆಳಗ್ಗೆ 11ಕ್ಕೆ ಪ್ರಧಾನಿ ಮೋದಿ ಅವರು ಆನ್‍ಲೈನ್ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ವಿಮ್ಸ್, ಜಿಲ್ಲಾಸ್ಪತ್ರೆ, 7 ಸಾರ್ವಜನಿಕ ಆಸ್ಪತ್ರೆಗಳು, ಮಿಲ್ಲರಪೇಟೆ ನಗರ ಆರೋಗ್ಯ ಕೇಂದ್ರ, ಚೆಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂದರೇ 11 ಕಡೆ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದ ಡಿಸಿ ಮಾಲಪಾಟಿ ಅವರು ಇಡೀ ಕಾರ್ಯಕ್ರಮ ಸುಸೂತ್ರವಾಗಿ ಜರುಗುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.ಯಾವುದೇ ರೀತಿಯ ಸಮಸ್ಯೆಗಳಾಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಲಸಿಕೆ ಚಾಲನೆ ನೀಡುವ ದಿನ ಆರೋಗ್ಯ ಇಲಾಖೆ ಸಿಬ್ಬಂದಿಗಳೆಂದರೇ ವೈದ್ಯರು,ಗ್ರೂಪ್ ಡಿ,ನರ್ಸ್ ಸೇರಿದಂತೆ ಎಲ್ಲರೂ ಇರುವಂತೆ ನೋಡಿಕೊಳ್ಳಬೇಕು. ಪ್ರತಿ ಕೇಂದ್ರದಲ್ಲಿ ಲಸಿಕೆ ನೀಡುವವರ ವಿವರ ನಾಳೆ ಮಧ್ಯಾಹ್ನದೊಳಗೆ ಸಲ್ಲಿಸುವಂತೆ ಅವರು ಸೂಚಿಸಿದರು.
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅನಿಲಕುಮಾರ್ ಅವರು ಕೋವಿಡ್ ಲಸಿಕಾಕರಣ ಕಾರ್ಯಕ್ರಮವನ್ನು ಸಭೆಗೆ ವಿವರಿಸಿ ತಂಡ ಹಾಗೂ ಅಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ವಿವರಿಸಿದರು.
ಎಸ್ಪಿ ಸೈದಲು ಅಡಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜನಾರ್ಧನ್, ವಿಮ್ಸ್ ನಿರ್ದೇಶಕ ಗಂಗಾಧರಗೌಡ,ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು ಮಾತನಾಡಿದರು.ಸಹಾಯಕ ಆಯುಕ್ತರಾದ ರಮೇಶ ಕೋನರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.