ನಾಡಿಗೆ ಮುರುಘಾಮಠದ ಕೊಡುಗೆ ಅನನ್ಯ

ಧಾರವಾಡ,ಜು10: ನಾಡಿಗೆ ಮುರುಘಾಮಠದ ಕೊಡುಗೆ ಅನನ್ಯವಾಗಿದ್ದು, ಅಂಥ ಸೇವೆಯನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್ ಪದವಿ ಮುರುಘಾಮಠಕ್ಕೆ ಸಲ್ಲುತ್ತದೆ ಎಂದು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಗುರುವಂದನಾ ಹಾಗೂ ನಾಗರಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮುರುಘಾಮಠದಲ್ಲಿ ಹಲವು ವರ್ಷಗಳಿಂದ ನಡೆದು ಬಂದ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಕವಿವಿ ನೀಡಿರುವ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದು ನಾನು ನೆಪ ಮಾತ್ರ. ಅದು ಶ್ರೀಮಠಕ್ಕೆ ಸಲ್ಲುತ್ತದೆ ಎಂದರು.
ಸಾಹಿತಿ ಡಾ. ರಮಜಾನ್ ದರ್ಗಾ ಮಾತನಾಡಿ, ಮುರುಘಾಮಠಕ್ಕೆ ಮುರುಘಾ ಪರಂಪರೆ ಇದೆ. ಸಾಹಿತ್ಯ, ಸಂಸ್ಕೃತಿ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ಕೆ ಮುರುಘಾಮಠದ ಕೊಡುಗೆ ಅಪಾರ. ಇಂಥ ಕಾರ್ಯಗಳನ್ನು ಮಾಡುತ್ತಿರುವ ಮುರುಘಾಮಠದ ಸ್ವಾಮೀಜಿಯವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದ್ದು ಶ್ಲಾಘನೀಯ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ದೀಪಕ್ ಚಿಂಚೋರೆ ಮಾತನಾಡಿ, ಕರ್ನಾಟಕ ವಿಶ್ವವಿದ್ಯಾಲಯವು ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದ್ದು ಶ್ಲಾಘನೀಯ. ಈ ಹಿನ್ನೆಲೆಯಲ್ಲಿ ಅವರಿಗೆ ನಾಗರಿಕ ಸಮ್ಮುಖದಲ್ಲಿ ಗುರುವಂದನೆ ಹಾಗೂ ಸನ್ಮಾನಿಸಿದ್ದು ಸಂತಸ ತಂದಿದೆ ಎಂದರು.
ಹುಬ್ಬಳ್ಳಿಯ ಮೂರುಸಾವಿರಮಠದ ಶ್ರೀ ಜಗದ್ಗುರು ರಾಜಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಡಾ. ಅಜಿತ್ ಪ್ರಸಾದ್, ಶಿವಣ್ಣ ಬೆಲ್ಲದ, ಆರ್.ಯು. ಬೆಳ್ಳಕ್ಕಿ, ಶರಣಪ್ಪ ಕೊಟಗಿ, ಡಾ. ಮಯೂರ ಮೋರೆ, ಕವಿತಾ ಕಬ್ಬೇರ, ಶ್ರೀ ದೇವಪ್ಪಜ್ಜನವರು, ಶಂಕರ ಹೊಸಮನಿ, ಸತೀಶ ತುರಮರಿ, ಮಲ್ಲು ಗಾಣಗೇರ, ಇತರರು ಉಪಸ್ಥಿತರಿದ್ದರು.