ನಾಡಿಗೆ ಮಠ-ಮಾನ್ಯಗಳ ಕೊಡುಗೆ ಅಪಾರ

ಕಲಬುರಗಿ.ನ.9: ನಮ್ಮ ನಾಡಿನಲ್ಲಿ ಅನೇಕ ಮಠ-ಮಾನ್ಯಗಳು ಅನ್ನ ದಾಸೋಹ, ಜ್ಞಾನ ದಾಸೋಹ, ಆರೋಗ್ಯ ಸೇವೆ, ಸಂಸ್ಕಾರ, ಪರಂಪರೆ, ಮೌಲ್ಯಗಳನ್ನು ನೀಡುವ ಮೂಲಕ ನಾಡಿಗೆ ನೂರಾರು ವರ್ಷಗಳಿಂದ ತಮ್ಮದೇ ಆದ ಅಪಾರವಾದ ಕೊಡುಗೆಯನ್ನು ನೀಡುತ್ತಿವೆಯೆಂದು ಪರಮಪೂಜ್ಯ ಗುರುನಾಥ ಮಹಾಸ್ವಾಮೀಜಿಗಳು ತಮ್ಮ ಅಭಿಮತ ವ್ಯಕ್ತಪಡಿಸಿದರು.
ಅವರು ತಾಲೂಕಿನ ಸಾವಳಗಿ(ಬಿ)ಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ಕಲ್ಯಾಣ ಸಂಸ್ಥೆಯಡಿಯಲ್ಲಿನ ‘ಶ್ರೀ ಜಗದ್ಗುರು ಮಲ್ಲಿಕಾರ್ಜುನ ಪಿಯು ಕಾಲೇಜು’ ಮತ್ತು ‘ಶ್ರೀ ಶಿವಲಿಂಗೇಶ್ವರ ಪೌಢಶಾಲೆ’ಯ ಜಂಟಿ ಆಶ್ರಯದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ಜರುಗುತ್ತಿರುವ ‘ಕನ್ನಡ ತಿಂಗಳು-ಕನ್ನಡದ ಕಣ್ಮಣಿಗಳು’ ಸರಣಿ ಕಾರ್ಯಕ್ರಮ-7ರಲ್ಲಿ ಭಾನುವಾರ ಆಯೋಜಿಸಿದ್ದ ‘ಕನ್ನಡ ನಾಡಿಗೆ ಮಠ-ಮಾನ್ಯಗಳ ಕೊಡುಗೆ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ನಾಡಿನಲ್ಲಿ ಮಠಗಳು ಇರದೇ ಹೊಗಿದ್ದರೆ ಪ್ರತಿಯೊಂದು ಗ್ರಾಮದಲ್ಲಿ ಪೊಲೀಸ್ ಠಾಣೆ ಸ್ಥಾಪಿಸುವ ಸಂದರ್ಭ ಬರಬಹುದು. ಮಠಗಳು, ಅನೇಕ ಪೂಜ್ಯರು ಸಂಸ್ಕಾರ, ಮೌಲ್ಯಗಳನ್ನು ಜನರಲ್ಲಿ ಬಿತ್ತಿ, ಪರಸ್ಪರ ಸೌಹಾರ್ಧತೆಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡುತ್ತಿರುವುದು ಮರೆಯುವಂತಿಲ್ಲ. ಸಿದ್ದಗಂಗಾ, ಸುತ್ತುರು, ಮೂರುಸಾವಿರ ಮಠ, ಹಾನಗಲ್ ಕುಮಾರೇಶ್ವರ ಮಠ, ಚಿತ್ರದುರ್ಗ ಮುರಘಾ ಮಠ, ಶರಣಬಸವೇಶ್ವರರ ಸಂಸ್ಥಾನ, ಬಾಲ್ಕಿ ಸಂಸ್ಥಾನ ಮಠ, ಶಿವಲಿಂಗೇಶ್ವರ ಮಠ, ಧರ್ಮಸ್ಥಳದ ಮಂಜುನಾಥೇಶ್ವರ ಸಂಸ್ಥಾನ, ಆದಿಚಿಂಚನಗಿರಿ ಸಂಸ್ಥಾನ, ಕೊಪ್ಪಳ ಗವಿಸಿದ್ದೇಶ್ವರ ಸಂಸ್ಥಾನ ಮಠ ಸೇರಿದಂತೆ ನಮ್ಮ ನಾಡಿಗೆ ಕೊಡುಗೆ ನೀಡಿರುವ ಮಠಗಳ ಹೀಗೆ ಬೆಳೆಯುತ್ತಾ ಹೋಗುತ್ತದೆಯೆಂದರು.
ಮಠ-ಮಾನ್ಯಗಳ ವ್ಯಕ್ತಿತ್ವ ನಿರ್ಮಾಣ ಕೇಂದ್ರಗಳಾಗಿವೆ. ಅಜ್ಞಾನ, ಅಂಧಕಾರವನ್ನು ಹೋಗಲಾಡಿಸುವಲ್ಲಿ ಶ್ರಮಿಸುವ ಮೂಲಕ ವ್ಯಕ್ತಿಯನ್ನು ಶಕ್ತಿಯನ್ನಾಗಿಸುತ್ತವೆ. ಮಠಗಳ ಬೆಳವಣಿಗೆಗೆ ಭಕ್ತರ ಸಹಕಾರ ಅಗತ್ಯ. ಮಠದ ಆಡಳಿತದಲ್ಲಿ ಸಮಸ್ಯೆಯಿಂದ ಕೆಲವು ಸಂಸ್ಥೆಗಳು ಹಾಳಾಗಿವೆ. ಸಾವಳಗಿ ಶಿವಲಿಂಗೇಶ್ವರ ಮಠ ಹಿಂದು-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆಯೆಂದು ಹೇಳಿದರು.
ಉಪನ್ಯಾಸಕ ಎಚ್.ಬಿ.ಪಾಟೀಲ, ಕನ್ನಡ ಶಿಕ್ಷಕ ಜಗದೇವಪ್ಪ ಕರಭೀಮಣ್ಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯ ಚನ್ನಬಸಯ್ಯ ಸ್ಥಾವರಮಠ, ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ಪ್ರಕಾಶ ಸರಸಂಬಿ, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಸಿ.ಬಳ್ಳಾರಿ, ಸಹ ಶಿಕ್ಷಕರಾದ ನಾಮದೇವ ಪವಾರ, ಚಂದ್ರಶೇಖರ ಪವಾರ, ಚನ್ನಬಸವ ಬಿರಾದಾರ, ರಾಜಕುಮಾರ ಕನಗೊಂಡ, ಪ್ರಕಾಶ ಬಂಟನೂರ,ಶಿವಲಿಂಗಪ್ಪ ಹರಶೆಟ್ಟಿ, ಮಲ್ಲಪ್ಪ ಶಿರಗುಂಪಿ, ಸಿಬ್ಬಂದಿಗಳಾದ ಸಚಿನ್ ಬಾಲ್ಕಿ, ಶಿವಲಿಂಗಪ್ಪ ಕಡಕೋಳ ಸೇರಿದಂತೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.