ನಾಡಿಗೆ ಡಾ.ಸಂಗಬಸವ ಶ್ರೀಗಳ ಕೊಡುಗೆ ಅನನ್ಯ

ಭಾಲ್ಕಿ:ನ.24: ಜಗದ್ಗುರು ಡಾ.ಸಂಗನಬಸವ ಸ್ವಾಮೀಜಿ ಅವರು ತಮ್ಮ ಜೀವಿತಾವಧಿಯಲ್ಲಿ ಹಲವು ಮಹತ್ಕಾರ್ಯಗಳ ಮೂಲಕ ಸಮಾಜ ಮತ್ತು ನಾಡಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ನಡೆದ ಗದಗ, ಹೊಸಪೇಟೆ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಡಾ.ಸಂಗನಬಸವ ಸ್ವಾಮೀಜಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಶಿವಯೋಗ ಮಂದಿರದ ಅಧ್ಯಕ್ಷರಾಗಿ ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಬಡ ಮಕ್ಕಳಿಗೆ ಅಕ್ಷರ, ದಾಸೋಹ, ವಸತಿ ನೀಡುವ ಮೂಲಕ ತ್ರೀವಿಧಿ ದಾಸೋಹಿಗಳಾಗಿ ಸಮಾಜಕ್ಕೆ ಅದ್ಭುತ ಕೊಡುಗೆ ನೀಡಿದ್ದರು.
ಜತೆಗೆ ಯುವ ಯತಿಗಳಿಗೆ ಮಾರ್ಗದರ್ಶಕರಾಗಿದ್ದ ಡಾ.ಸಂಗನಬಸವ ಸ್ವಾಮೀಜಿ ಅವರ ನಿಧನದಿಂದ ಸಮಾಜದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಶ್ರೀಗಳ ಅಗಲಿಕೆಯಿಂದ ಅವರ ಅಪಾರ ಭಕ್ತ ಸಾಗರ ಶೋಕದಲ್ಲಿ ಮೊಳಗಿದೆ. ಶ್ರೀಗಳ ಅಗಲಿಕೆ ದುಖವನ್ನು ತಡೆದುಕೊಳ್ಳುವ ಶಕ್ತಿ ವಿಶ್ವಗುರು ಬಸವಣ್ಣನವರು ಎಲ್ಲರಿಗೂ ಕಲ್ಪಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಚನಶೆಟ್ಟಿ, ಶಶಿಧರ ಕೋಸಂಬೆ, ಸಂಗಮೇಶ ಮದಕಟ್ಟಿ, ರಾಜಕುಮಾರ ಬಿರಾದಾರ್, ಅಶೋಕ ಬಾವುಗೆ, ಪ್ರಭು ಡಿಗ್ಗೆ, ಸಂಗಮೇಶ ಗುಮ್ಮೆ, ಸೂರ್ಯಕಾಂತ ಸುಂಟೆ, ನಾಗಭೂಷಣ ಮಾಮಡಿ, ಸಂತೋಷ ಬಿಜಿ ಪಾಟೀಲ್, ಕಾಶಿನಾಥ ಲದ್ದೆ, ಸಿದ್ದು ತುಗಶೆಟ್ಟೆ, ಜಾಲೇಂದ್ರ ಭೌರಾ ಸೇರಿದಂತೆ ಹಲವರು ಇದ್ದರು.