
ಕಲಬುರಗಿ,ಮೇ.05: ನಮ್ಮ ಕನ್ನಡ ನಾಡು, ನುಡಿ, ಸಾಹಿತ್ಯ, ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಶತಮಾನದಿಂದ ಶ್ರಮಿಸುತ್ತಿರುವ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ‘ಕನ್ನಡ ಸಾಹಿತ್ಯ ಪರಿಷತ್’ನ ಕೊಡುಗೆ ಅನನ್ಯವಾಗಿದೆ. ಸಮಸ್ಥ ಕನ್ನಡಿಗರೆಲ್ಲರು ಸಂಸ್ಥೆಯ ಸದಸ್ಯತ್ವ ಪಡೆದು, ಕಸಾಪದ ಕನ್ನಡ ಕಟ್ಟುವ ಕಾರ್ಯಕ್ಕೆ ಕೈಜೋಡಿಸಿದರೆ, ಕನ್ನಡತನ ಕಾರ್ಯಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರಲು ಸಾಧ್ಯವಾಗುತ್ತದೆ ಎಂದು ಗುರುಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ ಅಭಿಮತಪಟ್ಟರು.
ನಗರದ ಶಹಾಬಜಾರ ಕಬಾಡಗಲ್ಲಿಯ ಚನ್ನಮಲ್ಲೇಶ್ವರ ಶಾಲೆಯ ಆವರಣದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್’ನ ಉತ್ತರ ವಲಯದ ವತಿಯಿಂದ ಕಸಾಪ 109ನೇ ದಿನಾಚರಣೆಯನ್ನು ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಪನ್ಯಾಸಕ, ಲೇಖಕ ಎ.ಬಿ.ಪಾಟೀಲ ಮಾತನಾಡಿ, ದೂರದೃಷ್ಟಿಯ ನೇತಾರ ಸರ್.ಎಂ.ವಿಶ್ವೇಶ್ವರಯ್ಯನವರು ಕನ್ನಡ ಸಾಹಿತ್ಯ, ಭಾಷೆಯ ರಕ್ಷಣೆಯ ಉದ್ದೇಶದಿಂದ, ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಪೋಷಕತ್ವದಲ್ಲಿ ಬೆಂಗಳೂರಿನಲ್ಲಿ 1915ರಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಿದರು. ಪರಿಷತ್ ಪ್ರತಿವರ್ಷ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿ ಸಾಹಿತ್ಯ ಕ್ಷೇತ್ರದ ದಿಗ್ಗಜರು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳನ್ನು ಬೃಹತ ಸಂಖ್ಯೆಯಲ್ಲಿ ಒಂದೆಡೆ ಸೇರಿಸಿ, ಸಾಹಿತ್ಯ ಮತ್ತು ಭಾಷೆಯ ಪ್ರಸ್ತುತ ಸ್ಥಿತಿಗತಿಗಳು, ಸಮಸ್ಯೆಗಳು ಚರ್ಚಿಸಿ, ಅದಕ್ಕೆ ಪರಿಹಾರವನ್ನು ಕಂಡುಹಿಡಿಯುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಕನ್ನಡತನ ಪ್ರವೃತ್ತಿಯನ್ನು ನಾಡಿನ ಮೂಲೆ-ಮೂಲೆಗಳಿಗೂ ಹಬ್ಬಿಸಲು ಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಉಕಲಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮೂಲಗೆ ಗೌರವ ಉಪಸ್ಥಿತಿ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ದೂಳಪ್ಪ ಹಾದಿಮನಿ, ಚನ್ನಮಲ್ಲಯ್ಯ ಹಿರೇಮಠ, ಪರಿಷತ್‍ನ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಬಾಳ್ಳಿ, ಕಾರ್ಯದರ್ಶಿ ನಾಗೇಶ ತಿಮಾಜಿ ಬೆಳಮಗಿ, ಖಜಾಂಚಿ ಶ್ರೀಕಾಂತ ಪಾಟೀಲ ದಿಕ್ಸಂಗಿ, ಕನ್ನಡಾಭಿಮಾನಿ ಲಕ್ಷ್ಮೀಕಾಂತ ಸುತಾರ ಸೇರಿದಂತೆ ಮತ್ತಿತರರಿದ್ದರು.