ನಾಡಿಗಾಗಿ ಹುತಾತ್ಮರಾದ ರಂಜಾನ್ ಸಾಬ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.06: ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು, ಕನ್ನಡ ನಾಡನ್ನು ಒಟ್ಟುಗೂಡಿಸಿ ಕರ್ನಾಟಕ ಏಕೀಕರಣ ಮಾಡಿದ ಮಹನೀಯರ ಅನೇಕರು. ಆದರೆ, ಆ ವೇಳೆ ಈ ನಾಡು ನುಡಿಯ ಸಲುವಾಗಿ ಪ್ರಾಣದ ಹಂಗು ತೊರೆದು ಹೋರಾಟ ಮಾಡಿ ಹುತಾತ್ಮರಾದವರು ಪೈಲ್ವಾನ್  ಪಿಂಜಾರ ರಂಜಾನ್ ಸಾಬ್, ಅವರ ಹೆಸರು ಚಿರಸ್ಥಾಯಿಯಾಗಿ ಎಂದಿಗೂ ಉಳಿಯಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ವಾದಿರಾಜ ಸಾಮರಸ್ಯ ಹೇಳಿದರು.
ಅವರು ನಗರದ ರಾಘವ ಕಲಾ ಮಂದಿರದಲ್ಲಿ ರಂಗತೋರಣವತಿಯಿಂದ ನಡೆದ ಸಿದ್ದರಾಮ ಕಲ್ಮಠ ರಚಿತ ಪೈಲ್ವಾನ ಪಿಂಜಾರ್ ರಂಜಾನ್ ಸಾಬ್ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ರಂಜಾನ್ ಸಾಬ್ ಅವರದು ಕನ್ನಡಿಗರು ಮರೆಯಲಾಗದ ಹೋರಾಟವಾಗಿದೆ. ಅಂದಿನ ಹೋರಾಟದಲ್ಲಿ ಹುತಾತ್ಮರಾದ ರಂಜಾನ್ ಸಾಬ್ ರವರ ಹೆಸರನ್ನು ನಗರದ ಪ್ರಮುಖ ರಸ್ತೆಯೊಂದಕ್ಕೆ ಹೆಸರಿಸಬೇಕೆಂದು ಅವರು ಒತ್ತಾಹಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರು ವಿ.ವಿ ಪ್ರಾಧ್ಯಾಪಕರಾದ ಡಾ.ರಾಜಪ್ಪ ದಳವಾಯಿ ಮಾತನಾಡಿ ಬಳ್ಳಾರಿ ಕಲಾವಿದರ ತೊಟ್ಟಿಲಾಗಿದೆ, ಕನ್ನಡ ಮತ್ತು ಸಂಸ್ಕೃತಿಯ ಬೀಡಾಗಿದೆ. ಈ ಕನ್ನಡದ ಪರಿಸರವನ್ನು ಉಳಿಸಲು ಅಂದು ಕಾರಣೀಭೂತರಾದವರು ಹಲವಾರಾದರೆ, ಆ ಚಳುವಳಿಯಲ್ಲಿ ಹುತಾತ್ಮರಾದ ಏಕೈಕ ಕನ್ನಡಿಗ ಬಳ್ಳಾರಿಯ  ಪೈಲ್ವಾನ್ ರಂಜಾನ್ ಸಾಬ್ ಎಂಬುದು ಈ ನಾಡು ನೆನಪಿಡಬೇಕೆಂದರು.
ಲೇಖಕ ಸಿದ್ಧರಾಮ ಕಲ್ಮಠ ಮಾತನಾಡಿ, ಕರ್ನಾಟಕದಲ್ಲಿ ಮನೆ ಮಾತಾಗಬೇಕಿದ್ದ ರಂಜಾನ್ ಸಾಬ್ ರವರ ಹೆಸರು ನೇಪಥ್ಯಕ್ಕೆ ಸರಿದಿರುವುದು ವಿಷಾದದ ಸಂಗತಿ, ಗಡಿಭಾಗದ ಈ ನೆಲ ಮೈಸೂರು ರಾಜ್ಯಕ್ಕೆ ಸೇರಿರುವುದು ರಂಜಾನ್ ಸಾಬ್ ಮತ್ತು ಅವರ ಜೊತೆ ಕನ್ನಡ ಪರ ಹೋರಾಟಗಾರರು ಕಾರಣ. ಅವರನ್ನು ಬಳ್ಳಾರಿಗರಷ್ಟೆ ಸ್ಮರಿಸಿದರೆ ಸಾಲದು ಇಡೀ ರಾಜ್ಯ ಅವರನ್ನು ಸ್ಮರಿಸಬೇಕಾದ ಅಗತ್ಯವಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಪಿ ಅಬ್ದುಲ್ ಸಾಬ್, ಬಾಬಣ್ಣ, ಡಿ ಹುಸೇನ್ ಅವರನ್ನು ಸನ್ಮಾನಿಸಿ ಸತ್ಕರಿಸಲಾಯಿತು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಎಚ್ ಎಂ ಗುರುಸಿದ್ದಸ್ವಾಮಿ, ರಂಜಾನ್ ಸಾಬ್ ಅವರ ಭಾವಚಿತ್ರದ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು, ರಂಗತೋರಣದ ಅಧ್ಯಕ್ಷ ಆರ್ ಭೀಮಸೇನ್ ಕಾರ್ಯದರ್ಶಿ ಪ್ರಭು ಕಪ್ಪಗಲ್ಲು, ದಾದಾ ಖಲಂದರ್, ಸರ್ಮಾಸ್ ವಲಿ, ಸೇರಿದಂತೆ ಇತರರಿದ್ದರು.
ಇದೇ ವೇಳೆ ದಿವಂಗತ ನಾಡೋಜ ಬೆಳಗಲ್ಲು ವೀರಣ್ಣನವರಿಗೆ ನುಡಿ ನಮನ ಸಲ್ಲಿಸಲಾಯಿತು. ರಂಗತೋರಣದ  ಅಡವಿ ಸ್ವಾಮಿ ನಿರೂಪಿಸಿ ವಂದಿಸಿದರು.