ನಾಡಗೌಡರ ಹುಟ್ಟುಹಬ್ಬ ನಿಖೀಲ್ ಆಗಮನ

ಸಿಂಧನೂರು.ಜ.೪- ಜ.೫ ರಂದು ಶಾಸಕ ವೆಂಕಟರಾವ ನಾಡಗೌಡರ ಹುಟ್ಟುಹಬ್ಬ ಇದ್ದು, ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷರು ಹಾಗೂ ಚಲನಚಿತ್ರ ನಟರಾದ ನಿಖೀಲ್ ಕುಮಾರ ಸ್ವಾಮಿ ಬರಲಿದ್ದಾರೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷರಾದ ಬಸವರಾಜ ನಾಡಗೌಡ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನವರಿ ೫ ರಂದು ಮಾಜಿ ಸಚಿವ ಶಾಸಕ ವೆಂಕಟರಾವ ನಾಡಗೌಡರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತದೆ. ಅಂದು ಮುಂಜಾನೆ ಶಾಸಕ ವೆಂಕಟರಾವ ನಾಡಗೌಡರು ಜವಳಗೇರಾದ ಆರಾಧ್ಯ ದೈವ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ನಂತರ ನಗರಕ್ಕೆ ಬಂದು, ವಿವಿಧ ದೇವಸ್ಥಾನ ಹಾಗೂ ಚರ್ಚ್, ಮಸೀದಿಗಳಿಗೆ ಬೇಟಿ ನೀಡಿ ದರ್ಶನ ಪಡೆಯಲಿದ್ದಾರೆ ಎಂದರು.
ಜ.೫ ರಂದು ಮುಂಜಾನೆ ದೇವಸ್ಥಾನ, ಚರ್ಚ್, ಮಸೀದಿ ಬೇಟಿ ನಂತರ ನಗರದ ಸರ್ಕಿಟ್ ಹೌಸದಿಂದ ನಿಖೀಲ್ ಕುಮಾರಸ್ವಾಮಿ ಹಾಗೂ ಶಾಸಕ ವೆಂಕಟರಾವ ನಾಡಗೌಡರನ್ನು ಬೈಕ್ ರ್‍ಯಾಲಿ ಮುಖಾಂತರ ನಗರದ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆಯ ಮಾಡುವ ಮೂಲಕ ಕಮ್ಮವಾರು ಭವನಕ್ಕೆ ಬರಲಾಗುತ್ತದೆ ಎಂದರು.
ಮಧ್ಯಾಹ್ನ ೨ ಗಂಟೆಯ ನಂತರ ಕಮ್ಮವಾರು ಭವನದಲ್ಲಿ ಪಕ್ಷದ ವತಿಯಿಂದ ಬಹಿರಂಗ ಸಾರ್ವಜನಿಕರ ಸಭೆಯನ್ನು ನಡೆಸಲಾಗುತ್ತದೆ. ಆದ್ದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹುಟ್ಟುಹಬ್ಬ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಬಸವರಾಜ ನಾಡಗೌಡರು ಮನವಿ ಮಾಡಿಕೊಂಡರು.
ಪಕ್ಷದ ಮುಖಂಡರಾದ ವೆಂಕಟೇಶ್ ನಂಜಲಧಿನ್ನಿ, ಸುಮೀತ ತಡಕಲ್ ಸೇರಿದಂತೆ ಇತರರು ಪತ್ರಿಕೆಯ ಗೋಷ್ಠಿಯಲ್ಲಿ ಹಾಜರಿದ್ದರು.