ನಾಡಗೀತೆ, ರಾಷ್ಟ್ರಗೀತೆ, ಟ್ಯಾಗೋರ, ಕುವೆಂಪು ಚಿತ್ರಕ್ಕೆ ಕೆಸರು, ಸೆಗಣಿ ಬಳಿದ ಕಿಡಿಗೇಡಿಗಳು

ಶಹಾಬಾದ್:ಆ.29:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲ ಕಿಡಿಗೇಡಿಗಳು ನಾಡಗೀತೆ, ರಾಷ್ಟ್ರಗೀತೆ ಬರೆದು, ರಾಷ್ಟ್ರಕವಿ ರವೀಂದ್ರ ನಾಥ ಟ್ಯಾಗೂರ, ಕುವೆಂಪು ಅವರ ಭಾವಚಿತ್ರಕ್ಕೆ ಕಿಡಗೇಡಿಗಳು ಸೆಗಣಿ, ಕೆಸರು ಬಳಿದು, ಶಾಲೆ ಕಿಟಕಿ ಮುರಿದು, ವರ್ಗಕೋಣೆಯಲ್ಲಿ ಕಲ್ಲು, ಗಾಜು ಹಾಕಿ, ವಿಕೃತಿ ಮೆರೆದಿದ್ದಾರೆ.

ನಗರದ ಶರಣಬಸವೇಶ್ವರ ದೇವಸ್ಥಾನ ರಸ್ತೆಯಲ್ಲಿರುವ ಜಿಪಿಎಸ್ ಸರಕಾರಿ ಶಾಲೆಯಲ್ಲಿ ಶನಿವಾರ ಮಧ್ಯಾಹ್ನ, ಭಾನುವಾರ ಶಾಲೆಗೆ ರಜೆ ಇರುವದನ್ನು ಬಳಿಸಿಕೊಂಡ ಕಿಡಿಗೇಡಿಗಳು, ಶಾಲೆಯ ಆವರಣಕ್ಕೆ ಬಂದು ಶಾಲೆಯಲ್ಲಿ ಸರ್ಕಾರದಿಂದ ನಲಿಕಲಿ ಯೋಜನೆ ಅಡಿಯಲ್ಲಿ ಶಾಲೆಯ ಗೋಡೆಗೆ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೂರ ಭಾವಚಿತ್ರದೊಂದಿಗೆ ಬರೆದ ರಾಷ್ಟ್ರಗೀತೆ, ಹಾಗೂ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರದೊಂದಿಗೆ ಬರೆದ ನಾಡಗೀತೆಗೆ ಚಪ್ಪಲಿಗೆ ಕೆಂಪು ಮಣ್ಣಿನ ಕೆಸರು ಹಚ್ಚಿ ಭಾವಚಿತ್ರಕ್ಕೆ ಮೆತ್ತಿದ್ದಾರೆ. ಅಲ್ಲದೆ, ಸೆಗಣಿ ಹೊಡೆದು ವಿಕೃತಿ ಮೆರೆದಿದ್ದಾರೆ.

ನಲಿಕಲಿ ಕೋಣೆಯ ಕಿಟಕಿ ಮುರಿದು ಒಳಹೊಕ್ಕು ಅಲ್ಲಿಯ ಅಲ್ಮಾರಿ ಒಡೆದು, ಒಳಗಿದ್ದ ಶಿಕ್ಷಕರ ವಯಕ್ತಿಕ ದಾಖಲೆ, ಹಾಜರಿ ಪುಸ್ತಕ ಸೇರಿದಂತೆ ಇತರೆ ಕಡತಗಳನ್ನು ಹರಿದು ಹಾಕಿದ್ದಾರೆ.ಇನ್ನೊಂದು ಕೋಣೆಯ ಕಿಟಕಿಯಿಂದ ನಲಿಕಲಿ ವರ್ಗಕೋಣೆಯಲ್ಲಿ ಬಾಟಲಿ, ಕಲ್ಲುಗಳನ್ನು ಎಸೆದಿದ್ದಾರೆ. ಇಷ್ಟು ಸಾಲುದು ಎಂಬಂತೆ ಶುದ್ದ ಕುಡಿಯುವ ನೀರಿನ ಯಂತ್ರವನ್ನು ಒಡೆದಿದ್ದು, ನೀರಿನ ನಲ್ಲಿ ಕಿತ್ತು ಹಾಕಿದ್ದಾರೆ.

ಸೋಮವಾರ ಬೆಳಗ್ಗೆ ಶಾಲೆಗೆ ಬಂದು ಶಿಕ್ಷಕರಿಗೆ ಈ ವಿಕೃತಿ ಕಂಡು ಬಂದಿದ್ದು, ಕೂಡಲೇ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೂರ ಭಾವಚಿತ್ರದೊಂದಿಗೆ ಬರೆದ ರಾಷ್ಟ್ರಗೀತೆ, ಹಾಗೂ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರದೊಂದಿಗೆ ಬರೆದ ನಾಡಗೀತೆಗೆ ಹಚ್ಚಿದ ಕೆಂಪು ಮಣ್ಣಿನ ಕೆಸರು, ಸಗಣಿಯನ್ನು ತೊಳೆದಿದ್ದಾರೆ. ಶಾಲೆಯ ಕೋಣೆಯ ಕಿಟಕಿ ಒಡೆದಿದ್ದು, ಅಲ್ಮಾರಿ ಒಡೆದಿದ್ದನ್ನು ಕಂಡು, ನಗರ ಪೊಲೀಸ್ ಠಾಣೆಗೆ ಮುಖ್ಯೋಪಾಧ್ಯಾಯರಾದ ಹೊನ್ನಪ್ಪ ಅವರು ಶಿಕ್ಷಕರೊಂದಿಗೆ ಠಾಣೆಗೆ ಹೋಗಿ ದೂರ ಸಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯೆ ಸಾಬೇರಾ ಬೇಗಂ, ಚಿತ್ರಕಲಾ ಶಿಕ್ಷಕ ಸಂತೋಷ ಸಲಗರ್, ಈರಮ್ಮಾ ಕಂಬಾನೂರ, ಭಾರತಿ, ಭಾಗ್ಯಲತಾ ಇದ್ದರು.


ಖಂಡನೆ:

ಜಿಪಿಎಸ್ ಶಾಲೆಯಲ್ಲಿ ಶಾಲೆ ರಜೆ ಇದ್ದಾಗ ಹಲವು ದಿನಗಳಿಂದ ಕಿಡಿಗೇಡಿಗಳು ಇಂತಹ ಹಲವಾರು ಕೃತ್ಯ ಮಾಡುತ್ತಿದ್ದು, ಈಗ ಶಾಲೆಯ ವರ್ಗಕೋಣೆ ಕಿಡಕಿ, ಅಲ್ಮಾರಿ ಮುರಿದಿದ್ದಲ್ಲದೆ, ರಾಷ್ಟ್ರಕವಿ ರವೀಂದ್ರ ನಾಥ ಟ್ಯಾಗೂರ, ಕುವೆಂಪು ಅವರ ಭಾವಚಿತ್ರಕ್ಕೆ ಕಿಡಗೇಡಿಗಳು ಸೆಗಣಿ, ಕೆಸರು ಬಳಿದು, ಶಾಲೆ ಕಿಟಕಿ ಮುರಿದು, ವರ್ಗಕೋಣೆಯಲ್ಲಿ ಕಲ್ಲು, ಗಾಜು ಹಾಕಿ, ವಿಕೃತಿ ಮೆರೆದಿರುವದು ಖಂಡನೀಯವಾಗಿದೆ. ಪೊಲೀಸರ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಶಾಲೆಯ ಸುತ್ತಲು ಕಂಪೌಡ ಸರಿಯಿಲ್ಲದ ಕಾರಣ ಈ ಘಟನೆಗಳು ನಡೆಯುತ್ತಿವೆ. – ಸಾಬೇರಾ ಬೇಗಂ. ನಗರ ಸಭೆ ಸದಸ್ಯೆ