ನಾಡಗೀತೆ ಕಡ್ಡಾಯವಲ್ಲ: ವಿವಾದಕ್ಕೆಡೆ

ಬೆಂಗಳೂರು, ಫೆ. ೨೧- ರಾಜ್ಯದ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ಸರ್ಕಾರದ ಸುತ್ತೋಲೆ ವಿವಾದಕ್ಕೆ ಕಾರಣವಾಗಿದೆ. ಈ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸುವ ಭರವಸೆಯ ಜತೆಗೆ ಆದೇಶದಲ್ಲಿ ಲೋಪವೆಸಗಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ.ಸದನದ ಒಳಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಈ ಬಗ್ಗೆ ಸ್ಪಷ್ಟನೆ ನೀಡಿದರೆ, ಸದನದ ಹೊರಗೆ ಮುದ್ರಣ ಲೋಪದೋಷದಿಂದ ಆಗಿರುವ ತಪ್ಪನ್ನು ಸರಿಪಡಿಸಿ ಮತ್ತೊಮ್ಮೆ ಸುತ್ತೋಲೆ ಹೊರಡಿಸುವುದಾಗಿ ಸ್ಪಷ್ಟಪಡಿಸಿದರು.ರಾಜ್ಯದ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಕಳೆದ ಫೆಬ್ರವರಿ ೧೬ ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದು ವಿವಾದಕ್ಕೆ ಕಾರಣವಾಗಿ ಸರ್ಕಾರದ ಆದೇಶದ ವಿರುದ್ಧ ವಿಪಕ್ಷಗಳು ಆಕ್ರೋಶ ಹೊರ ಹಾಕಿವೆ.ರಾಷ್ಟ್ರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಕುವೆಂಪುರವರ ಜಯಭಾರತ ಜನನಿಯ ತನುಜಾತೆ ಕವಿತೆಯನ್ನು ನಾಡಗೀತೆಯಾಗಿ ಸರ್ಕಾರಿ ಇಲಾಖೆಗಳು, ನಿಗಮ ಮಂಡಳಿ, ಪ್ರಾಧಿಕಾರಗಳು ಆಯೋಜಿಸುವ ಕಾರ್ಯಕ್ರಮದಲ್ಲೂ ಆರಂಭದಲ್ಲಿ ಹಾಡುವುದನ್ನು ಕಡ್ಡಾಯ ಮಾಡಲಾಗಿತ್ತು. ಆದರೆ ಸರ್ಕಾರದ ವಿವಾದಿತ ಸುತ್ತೋಲೆಯಲ್ಲಿ ಖಾಸಗಿ ಶಾಲೆಗಳು ಎಂಬ ಉಲ್ಲೇಖ ಇರದೆ ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳು ಎಂದು ಉಲ್ಲೇಖಿಸಲಾಗಿತ್ತು. ಇದರಿಂದ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ಅರ್ಥ ಬಂದಿತ್ತು. ಈ ಆದೇಶದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯ ಮಾಡಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು.
ಬಿಜೆಪಿ ಟೀಕೆ
ಸರ್ಕಾರದ ಈ ಸುತ್ತೋಲೆಯ ವಿರುದ್ಧ ಬಿಜೆಪಿ ಟೀಕೆ ಮಾಡಿದ್ದು, ವಿಪಕ್ಷ ನಾಯಕ ಆರ್. ಅಶೋಕ್ ನಾಡಗೀತೆಯನ್ನು ಈ ಶಾಲೆಗಳಲ್ಲಿ ಹಾಡುವುದು ಕಡ್ಡಾಯವಲ್ಲ ಎಂಬ ಆದೇಶ ಹೊರಡಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತೊಮ್ಮೆ ತನ್ನ ಕನ್ನಡ ವಿರೋಧಿ ಧೋರಣೆ ತೋರಿದೆ ಎಂದು ಟ್ವೀಟ್ ಮಾಡಿದ್ದಾರೆ.
ಎರಡು ದಿನದ ಹಿಂದಷ್ಟೇ ಕುವೆಂಪುರವರ ಜ್ಞಾನದೇಗುಲವಿದು ಕೈ ಮುಗಿದು ಒಳ ಬನ್ನಿ ಎಂಬ ಘೋಷವಾಕ್ಯವನ್ನು ಬದಲಿಸುವ ಹುನ್ನಾರ ಬಯಲಾದ ಬೆನ್ನಲ್ಲೆ ಈಗ ನಾಡಗೀತೆ ಕಡ್ಡಾಯವಲ್ಲ ಎನ್ನುವ ಮೂಲಕ ಮತ್ತೊಮ್ಮೆ ರಾಷ್ಟ್ರಕವಿ ಕುವೆಂಪು ರವರಿಗೆ ಮತ್ತು ಕನ್ನಡಾಂಬೆಗೆ ಅಪಮಾನ ಎಸಗಿದ್ದಾರೆ ಎಂದು ಟೀಕಿಸಿದ್ದಾರೆ.
ಅಶ್ವತ್ಥನಾರಾಯಣ್ ಟೀಕೆ
ರಾಜ್ಯ ಸರ್ಕಾರ ಅಧಿಕಾರಿಗಳ ಸರ್ಕಾರವಾಗಿದೆ. ಅಧಿಕಾರಿಗಳು ಮನಬಂದಂತೆ ತೀರ್ಮಾನ ಮಾಡುತ್ತಿದ್ದಾರೆ. ಕನ್ನಡದ ಅಸ್ಮಿತೆ ಎನಿಸಿರುವ ನಾಡಗೀತೆಯನ್ನು ಖಾಸಗಿ ಶಾಲೆಗಳಲ್ಲಿ ಹಾಡುವಂತಿಲ್ಲ ಎಂಬ ಸರ್ಕಾರದ ಸುತ್ತೋಲೆ ಸರಿಯಲ್ಲ ಎಂದು ಮಾಜಿ ಸಚಿವ ಡಾ. ಅಶ್ವತ್ಥ್‌ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ರಾಷ್ಟ್ರಕವಿ ಕುವೆಂಪುರವರಿಗೆ ಅವಮಾನ ಮಾಡುತ್ತಿದೆ. ಈ ಹಿಂದೆ ಜ್ಞಾನದೇಗುಲ ವಿಚಾರದಲ್ಲೂ ಇಂತಹದ್ದೇ ತೀರ್ಮಾನ ಮಾಡಲಾಗಿತ್ತು. ಈಗ ನಾಡಗೀತೆ ವಿಚಾರದಲ್ಲೂ ತಪ್ಪು ಮಾಡಿದ್ದಾರೆ. ಈ ರೀತಿಯ ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕನ್ನಡದ ಬಗ್ಗೆ ಕಾಳಜಿ ಇದೆ
ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ವಿಚಾರ ವಿವಾದಕ್ಕೆ ಒಳಗಾಗುತ್ತಿದ್ದಂತೆಯೇ ಎಚ್ಚೆತ್ತ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸುತ್ತೋಲೆಯಲ್ಲಿ ಮುದ್ರಣದಲ್ಲಿ ಲೋಪವಾಗಿದೆ. ನಮಗೆ ಎಲ್ಲ ಶಾಲೆಗಳೂ ಒಂದೇ. ಆದೇಶ ಮಾಡುವಾಗ ಸರ್ಕಾರಿ ಶಾಲೆ, ಅನುದಾನಿತ ಶಾಲೆ ಎಂದು ಮುದ್ರಣ ಮಾಡಿದ್ದಾರೆ. ಅದು ಎಲ್ಲ ಶಾಲೆ ಎಂದು ಮುದ್ರಣ ಮಾಡಿಸುತ್ತೇವೆ. ಎಲ್ಲ ಶಾಲೆಗಳಲ್ಲೂ ನಾಡಗೀತೆ ಹಾಡಿಸಲು ಸುತ್ತೋಲೆ ಹೊರಡಿಸುತ್ತೇವೆ. ಸರ್ಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ
ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದ ವಿವಾದಿತ ಸುತ್ತೋಲೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದುಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಸದಸ್ಯರು ಪ್ರಸ್ತಾಪಿಸಿ ವಿರೋಧ ವ್ಯಕ್ತಪಡಿಸಿದಾಗ ಸ್ಪಷ್ಟನೆ ನೀಡಿದ ಅವರು, ಕೋರ್ಟ್ ಆದೇಶವೊಂದ ಪ್ರಕಾರ ಸುತ್ತೋಲೆ ತಪ್ಪಾಗಿದೆ.ಇದನ್ನು ಕಂಡ ಸಚಿವರು ಸುತ್ತೋಲೆ ತಿದ್ದುಪಡಿ ಮಾಡಿ, ಹೊಸ ಆದೇಶ ಹೊರಡಿಸಿದ್ದಾರೆ.
ಇದೀಗ ಗೊಂದಲ ನಿವಾರಣೆ ಆಗಿದೆ.ಈ ಸುತ್ತೋಲೆ ತಪ್ಪಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು
ಇದಕ್ಕೂ ಮುನ್ನ ವಿಪಕ್ಷ ಸದಸ್ಯರು ಪ್ರಸ್ತಾಪಿಸಿ, ರಾಷ್ಟ್ರ ಕವಿ, ಜ್ಞಾನಪೀಠ ಪುರಸ್ಕೃತ ಡಾ. ಕುವೆಂಪುರವರ ‘ಜಯ ಭಾರತ ಜನನಿಯ ತನುಜಾತೆ’ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಹಾಗೂ ಅದಕ್ಕೆ ಫೆಬ್ರವರಿ ೧೬ರಂದು ಮಾಡಲಾದ ತಿದ್ದುಪಡಿ ಪ್ರಕಾರ, ‘
ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದರ ಬದಲಾಗಿ, ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂಬುದಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.ಇದು ಒಂದು ರೀತಿ ಅಧಿಕಾರಿಗಳ ಹುಚ್ಚಾಟ.ಸರ್ಕಾರಕ್ಕೂ ಅಧಿಕಾರಿಗಳು ಸಂಬಂಧ ಇಲ್ಲವೇ ಎಂಬಂತೆ ವರ್ತನೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.