ನಾಡಗೀತೆ ಕಡ್ಡಾಯವಲ್ಲ, ಮುದ್ರಣ ದೋಷ

ಬೆಂಗಳೂರು.ಫೆ೨೧- ಮುದ್ರಣ ದೋಷದಿಂದಾಗಿ ನಾಡಗೀತೆ ವಿಚಾರದಲ್ಲಿ ಗೊಂದಲವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎನ್ನುವ ಆದೇಶಕ್ಕೆ ಪ್ರತಿಕ್ರಿಯಿಸಿದ ಸಚಿವ ತಂಗಡಗಿ ಆದೇಶ ಮಾಡುವಾಗ ಎಲ್ಲಾ ಶಾಲೆ ಎಂದು ಬದಲಾಗಲಿದೆ
ಮನುಷ್ಯ ನಡೆಯುವಾಗ ಎಡವುತ್ತಾನೆ. ಇಲ್ಲಿ ಸಹಾ ಸಣ್ಣ ತಪ್ಪಾಗಿದೆ. ಅಧಿಕಾರಿಗಳು ಮನಸ್ಸೋ ಇಚ್ಛೆ ನಡೆದುಕೊಂಡಿಲ್ಲ. ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತವಿದೆ. ಆದರೆ ಸಣ್ಣ ತಪ್ಪಿನಿಂದ ಈ ಗೊಂದಲ ಆಗಿದೆ. ಎಲ್ಲವನ್ನೂ ಸರಿಪಡಿಸಿ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು.
ನಾಡಗೀತೆ ವಿವಾದ ಕೋರ್ಟ್‌ನಲ್ಲಿ ಇತ್ತು. ಸಿ ಅಶ್ವಥ್ ಅವರ ಧ್ವನಿಯಲ್ಲಿ ನಾಡಗೀತೆ ಪ್ರಸಾರವಾಗಬೇಕು. ಮೈಸೂರು ಅನಂತ ಸ್ವಾಮಿ ಅವರ ಧ್ವನಿಯಲ್ಲಿ ಅಲ್ಲ ಎಂದು ಕಿಕ್ಕೇರಿ ಕೃಷ್ಣ ಮೂರ್ತಿ ಅವರು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯಕ್ಕೆ ನಾವು ಮಾಹಿತಿ ನೀಡುವಾಗ ಈ ಆದೇಶ ಆಗಿದ್ದು ಅದರಲ್ಲಿ ಸಣ್ಣ ಮುದ್ರಣ ದೋಷವಾಗಿದೆ ಎಂದು ವಿವರಿಸಿದರು.
ನಮ್ಮ ಸರ್ಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇದೆ. ಈ ವಿಚಾರದಲ್ಲಿ ಬಹಳ ಸ್ಪಷ್ಟವಾಗಿ ಇದ್ದೇವೆ. ಮಾಧ್ಯಮ ಮಿತ್ರರಿಗೆ ಇದರ ಬಗ್ಗೆ ತಿಳಿಸಲೆಂದೇ ಬಂದಿದ್ದೇನೆ. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆಯಾಗಿದೆ ಎಂದರು.