ನಾಡಕಛೇರಿ ತೆರೆಯಲು ಒತ್ತಾಯ

ಕೋಲಾರ ಮೇ.೨೫- ನರಸಾಪುರ ಹೋಬಳಿ ನಾಡಕಛೇರಿ ಮುಚ್ಚಿರುವುದರಿಂದ ಹೋಬಳಿಯ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ರೈತರಿಗೆ, ವಯೋವೃದ್ಧರಿಗೆ ಹಾಗೂ ನಾಗರೀಕರಿಗೆ ತೊಂದರೆಯಾಗುತ್ತಿದ್ದು, ಕೊಡಲೇ ನಾಡ ಕಛೇರಿಯನ್ನು ತೆರೆದು ನಾಗರೀಕರಿಗೆ ಅನುವು ಮಾಡುವಂತೆ ಕೋರಿ ನಾಗರೀಕರ ಹಿತರಕ್ಷಣಾ ಸಮಿತಿಯು ಅಪರ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಛೇರಿಯ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ನರಸಾಪುರ ಹೋಬಳಿ ಕೇಂದ್ರವಾಗಿದ್ದು, ಸುಮಾರು ೩೦ಕ್ಕೂ ಹೆಚ್ಚು ಹಳ್ಳಿಗಳು ಹೋಬಳಿ ವ್ಯಾಪ್ತಿಗೆ ಬರುತ್ತದೆ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಮತ್ತು ರೈತರಾಗಿರುತ್ತಾರೆ. ನರಸಾಪುರ ಗ್ರಾಮದಲ್ಲಿ ನಾಡ ಕಛೇರಿ ಇದ್ದು, ಕಛೇರಿಯ ಅಧಿಕಾರಿಗಳ ಉದಾಸೀನತೆ ಮತ್ತು ನಿರ್ಲಕ್ಷತೆಯಿಂದ ಸುಮಾರು ದಿನಗಳಿಂದಲೂ ಕಛೇರಿ ಮುಚ್ಚಿದ್ದರೂ ಸಹ ಕೇಳುವವರೂ ಇಲ್ಲವಾಗಿದೆ ಎಂದು ಅರೋಪಿಸಿದರು.
ನಾಡ ಕಛೇರಿಯು ಬಾಗಿಲು ಹಾಕಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ರೈತರಿಗೆ, ವಯೋವೃದ್ಧರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯುಂಟಾಗುತ್ತಿದೆ.. ಶಾಲಾ ಕಾಲೇಜುಗಳ ಪ್ರವೇಶ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾಗಿರುವ ದಾಖಲಾತಿಗಳಾಗಲೀ ಅಥವಾ ರೈತರಿಗೆ ಬೇಕಾಗಿರುವ ದಾಖಲಾತಿಗಳು ಸದರಿ ಕಚೇರಿಯಿಂದ ಸಿಗುತ್ತಿಲ್ಲ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ. ಪ್ರತಿ ದಿನ ಸುಡು ಬಿಸಿಲಿನಲ್ಲಿ ನಾಗರೀಕರು ಕಛೇರಿಗೆ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಸಂಬಂಧವಾಗಿ ಕೂಡಲೇ ನಾಡಕಛೇರಿಯನ್ನು ತೆರೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಮನವಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ನರಸಾಪುರ ಹೋಬಳಿ ನಾಗರೀಕರ ಹಿತರಕ್ಷಣಾ ಸಮಿತಿಯ ಸಂಚಾಲಕರಾದ ನರಸಾಪುರ ಎಸ್.ನಾರಾಯಣಸ್ವಾಮಿ, ಖಾಜಿಕಲ್ಲಹಳ್ಳಿ ಕೆ.ವಿ.ನಾರಾಯಣಸ್ವಾಮಿ, ಬೆಳ್ಳೂರು ನಾಗರಾಜ, ಮುನಿರಾಜಪ್ಪ, ಬೈರಸಂದ್ರ ಮುನಿರಾಜಪ್ಪ ಹಾಜರಿದ್ದರು.