ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.24: ತಾಲ್ಲೂಕಿನ ತೆಕ್ಕಲಕೋಟೆಯಲ್ಲಿ ಗ್ಯಾರೆಂಟಿ ಯೋಜನೆಯ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಗಾಗಿ ಜನ ಇಲ್ಲಿನ ನಾಡ ಕಚೇರಿ ಹಾಗೂ ಕೆನರಾ ಬ್ಯಾಂಕ್ ಹಾಗೂ ಪಟ್ಟಣ ಪಂಚಾಯಿತಿಯ ಕೇಂದ್ರಕ್ಕೆ ಮುಗಿ ಬಿದ್ದಿದ್ದರು.
ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದಂತೆ ಗೃಹ ಜ್ಯೋತಿ, ಗೃಹಲಕ್ಷ್ಮೀ, ಅನ್ನ ಭಾಗ್ಯ ಗ್ಯಾರಂಟಿ ಯೋಜನೆಗಳಿಗೂ ಆಧಾರ್ ಸಂಖ್ಯೆ ಅನಿವಾರ್ಯವಾಗಿದೆ. ಗೃಹ ಲಕ್ಷ್ಮಿ ಯೋಜನೆ ಜಾರಿ ಬೆನ್ನಲ್ಲೇ ನವೀಕರಣ ಮಾಡಿಸಿಕೊಳ್ಳುವವರ ಸಂಖ್ಯೆ ದುಪ್ಪಟ್ಟಾಗಿದೆ.
ಪಟ್ಟಣದ ಎಲ್ಲಾ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಅಷ್ಟೇ ಅಲ್ಲದೇ ಗ್ಯಾರೆಂಟಿ ಭಾಗ್ಯಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ನಾಗರಿಕರು ಆಧಾರ್ ಕಾರ್ಡ್, ಕುಟುಂಬ ಪಡಿತರ ಚೀಟಿ, ಪಾನ್ ಕಾರ್ಡ್ ಸಿದ್ಧಪಡಿಸಿ ಕೊಳ್ಳಲು ಹಾತೊರೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಪಟ್ಟಣದ ನಾಡಕಚೇರಿಯ ಆಧಾರ್ ಕಾರ್ಡ್ ನೊಂದಣಿ ಸಿಬ್ಬಂದಿಯ ಇಬ್ಬರು ರಜೆಗೆ ತೆರಳಿದ್ದರಿಂದ ಗ್ಯಾರಂಟಿ ಭಾಗ್ಯ ಪಡೆಯಲು ಜನರ ನೂಕುನುಗ್ಗಲು ಉಂಟಾಗಿತ್ತು. ಇತ್ತ ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆಗಾಗಿ ಜನ ಮುಗಿಬಿದ್ದಿದ್ದು ಕಂಡುಬಂತು.