ನಾಟೌಟ್-100 ಪೆಟ್ರೋಲ್ ಬಂಕ್‌ಗಳ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ.ಜೂ.೧೧;  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಮತ್ತು ವಿವಿಧ ಘಟಕಗಳಿಂದ ದಾವಣಗೆರೆ ನಗರದ ವಿವಿಧ ಕಡೆಗಳಲ್ಲಿ ಕಾಂಗ್ರೆಸ್ ಕಾರ‍್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ,ಮಂಜಪ್ಪನವರ ಅಧ್ಯಕ್ಷತೆಯಲ್ಲಿ ದಾವಣಗೆರೆ ನಗರದ ಬಹುತೇಕ ಎಲ್ಲಾ ಪೆಟ್ರೋಲ್ ಬಂಕ್‌ಗಳ ಮುಂದೆ ಕಾರ‍್ಯಕರ್ತರು ಕ್ರಿಕೆಟ್ ಆಟವಾಡಿ ನಾಟೌಟ್-100 ಎಂದು ಕೇಂದ್ರ ಸರ್ಕಾರವನ್ನು ವ್ಯಂಗ್ಯವಾಡಿದರು. ದಾವಣಗೆರೆ ನಗರದ ಶಾಮನೂರು ರಸ್ತೆಯ ಬಳಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹೆಚ್.ಬಿ.ಮಂಜಪ್ಪನವರು ಇದು ಜನಸಾಮಾನ್ಯರು, ಬಡವರ ಪರ ಇರುವ ಸರ್ಕಾರ ಅಲ್ಲ, ಬಡವರ ರಕ್ತ ಹೀರುವ ಸರ್ಕಾರ, ಜನ ಕೊರೋನಾ ಸಂಕಷ್ಟದಿಂದ, ಸಾವು-ನೋವಿನಿಂದ, ಆರ್ಥಿಕ ಸಮಸ್ಯೆಗಳಿಂದ ಸಾಯುತ್ತಿದ್ದಾರೆ, ಅಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್ ದರ ಈ ರೀತಿ ದಿನದಿಂದ ದಿನಕ್ಕೆ ಹೆಚ್ಚಿಸಿದರೆ ಬಡವರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಜನಸಾಮಾನ್ಯರ ಮೇಲೆ ಕಾಳಜಿಯಿದ್ದರೆ ಇಂಧನ ಮೇಲೆ ಸುಂಕ ದರವನ್ನು ಕಡಿಮೆ ಮಾಡಲಿ, ರಾಜ್ಯ ಸರ್ಕಾರಗಳು ಕೂಡ ಮಾಡಲಿ, ಇಲ್ಲದಿದ್ದರೆ ಜನತೆಗೆ ಬದುಕುವುದು ಬಹಳ ಕಷ್ಟವಾಗುತ್ತದೆ, ಪೆಟ್ರೋಲ್,ಡೀಸೆಲ್ ಬೆಲೆ ಹೆಚ್ಚಳವಾದ ಕೂಡಲೇ ಸಾಗಣೆ-ಸಾಗಾಟ ದರ ಹೆಚ್ಚಳವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗುತ್ತದೆ, ದೇಶ ಹಾಳು ಮಾಡಬೇಡಿ ಎಂದು ಪ್ರಧಾನಿ ಮೋದಿಯವರನ್ನು ನೇರವಾಗಿ ಉದ್ದೇಶಿಸಿ ಹೇಳಿದರು.ದೇಶದಲ್ಲಿ ಬಿಜೆಪಿ ಸರ್ಕಾರ ನರಕ ಸೃಷ್ಟಿಸುತ್ತಿದೆ. ಜನರಿಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಹೇಳಿ  ಮೋದಿ ಅಧಿಕಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ ಮನಮೋಹನ್ ಸರ್ಕಾರದದಲ್ಲಿ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಅವರು ಹಾಹಾಕಾರ ಸೃಷ್ಟಿ ಮಾಡಿದ್ದರು.   ಜನರಿಗೆ ಸುಳ್ಳು ಭರವಸೆ ನೀಡಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರು. ಅಚ್ಛೇ ದಿನ್ ಆಯೇಂಗೆ ಎಂದು ಹೇಳಿದ್ದರು. ಇವತ್ತು ನರಕದ ದಿನಗಳ ಬಂದಿವೆ. ನಾವು ನರಕ ನೋಡಿರಲಿಲ್ಲ. ಆದರೆ, ಇದೀಗ ನರಕದ ದಿನಗಳನ್ನು ನೋಡುತ್ತಿದ್ದೇವೆ ಎಂದರು.ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ,  ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ ಜಿ.ಎಸ್.ಮಂಜುನಾಥ್, ಕೆ.ಚಮನ್ ಸಾಬ್,ಯುವರಾಜ್, ಸತೀಶ್, ಆನಂದ ಕರೇಗೌಡ್ರು, ಪ್ರಮೋದ್, ಪ್ರಜ್ವಲ್, ಮನು, ನಿಖಿಲ್, ನವೀನ್, ನೀಲಕಂಠಪ್ಪ, ಮಂಜು ರಿಯಲ್ ಎಸ್ಟೇಟ್ ಮತ್ತಿತರರಿದ್ದರು.