ನಾಟು ಹಾಡು ನೃತ್ಯಕ್ಕೆ ಸಿಗದ ಅವಕಾಶ

ನವದೆಹಲಿ, ಮಾ.೨೫- ಆಸ್ಕರ್ ಪ್ರಶಸ್ತಿ ಪಡೆದ ಬಳಿಕ ದಕ್ಷಿಣ ಭಾರತದ ಹೆಮ್ಮೆಯ ಚಿತ್ರವಾದ ಆರ್‌ಆರ್‌ಆರ್ ಚಿತ್ರದ ಕ್ರೇಜ್ ಇನ್ನು ಹೆಚ್ಚಾಯಿತು ಎನ್ನಬಹುದು. ಆದರೆ ಅದೇ ಆಸ್ಕರ್‌ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಭಾರತದ ನೃತ್ಯಪಟುಗಳಿಗೆ ಅವಕಾಶ ಕೊಟ್ಟಿಲ್ಲ ಎಂಬ ಹೊಸ ಚರ್ಚೆ ಹುಟ್ಟುಕೊಂಡಿದೆ.
ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡನ್ನು ಕೂಡ ಪ್ರತಿಷ್ಠಿತ ೯೫ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಆದರೆ ನಾಟು ನಾಟು ಹಾಡಿಗೆ ನರ್ತಿಸಿದವರಲ್ಲಿ ದಕ್ಷಿಣದ ಯಾರೊಬ್ಬ ಡ್ಯಾನ್ಸರ್ ಕೂಡಾ ಇರಲಿಲ್ಲ ಎಂಬುದು ವಿಷಾದಕರ ಸಂಗತಿಯಾಗಿದೆ.
ಅದೇ ರೀತಿ ದಕ್ಷಿಣದ ಯಾವೊಂದು ಪ್ರದರ್ಶನ ಕೂಡ ಅಕಾಡೆಮಿ ವೇದಿಕೆಯಲ್ಲಿ ನಡೆಯಲಿಲ್ಲ ಎಂಬುದು ಚರ್ಚೆಯ ವಿಷಯವಾಗಿದೆ.ನಾಟು ನಾಟು ಹಾಡುಗಾರರಾದ ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲ ಭೈರವ ವೇದಿಕೆಯಲ್ಲಿ ಹಾಡು ಹಾಡಿದಾಗ ದಕ್ಷಿಣ ಏಷ್ಯಾ ಭಾಗದ ಯಾವುದೇ ನರ್ತಕರು ವೇದಿಕೆಯಲ್ಲಿರಲಿಲ್ಲ ಎಂಬುದು ಹೆಚ್ಚಿನವರಿಗೆ ನಿರಾಸೆಗೆ ಕಾರಣವಾಗಿದೆ.
ಅಕಾಡೆಮಿ ಪ್ರಶಸ್ತಿಗಳಲ್ಲಿ ದಕ್ಷಿಣದ ಯಾವೊಬ್ಬ ನರ್ತಕ ನರ್ತಕಿ ಭಾಗಿಯಾಗದೇ ಇರುವುದು ಹಾಗೂ ವೇದಿಕೆಯಲ್ಲಿ ಹೆಜ್ಜೆ ಹಾಕದೇ ಇರುವುದು ನೃತ್ಯ ಸಮುದಾಯದ ಅನೇಕರನ್ನು ನಿರಾಶೆಗೆ ಒಳಪಡಿಸಿದೆ.
ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಚಿತ್ರಗಳಿಗೆ ಮನ್ನಣೆ ದೊರೆಯುವಾಗ ದಕ್ಷಿಣದ ನರ್ತಕ, ನರ್ತಕರಿಗೆ ಏಕೆ ಪ್ರಾಶಸ್ತ್ಯವಿಲ್ಲ ಎಂಬುದು ಹಲವರ ಪ್ರಶ್ನೆಯಾಗಿದೆ.
ಆದರೆ ೨೦೦೯ ರ ಆಸ್ಕರ್ ಸಮಾರಂಭ ಹೀಗಿರಲಿಲ್ಲ. ಭಾರತೀಯ ಗಾಯಕರು ಹಾಗೂ ಹೆಚ್ಚಿನ ಜನಾಂಗದ ನೃತ್ಯಗಾರರು ಹಾಗೂ ಸಂಗೀತಗಾರರ ಗುಂಪೇ ವೇದಿಕೆಯಲ್ಲಿ ನೆರೆದಿತ್ತು ಎಂದು ವರ್ಜೀನಿಯಾ ವಿಶ್ವವಿದ್ಯಾನಿಲಯದ ಮಾಧ್ಯಮ ಅಧ್ಯಯನದ ಸಹಾಯಕ ಪ್ರಾಧ್ಯಾಪಕರಾದ ಶಿಲ್ಪಾ ಡೇವ್ ಸ್ಮರಿಸುತ್ತಾರೆ.
ಸಂಗೀತ ಲಿಂಗ, ಜನಾಂಗ, ಧರ್ಮವನ್ನು ಮೀರಿರುವ ಒಂದು ದೈವದತ್ತ ಕಲೆ ಎಂಬುದನ್ನು ಕಲಾಕಾರರು ಆ ಸಮಯದಲ್ಲಿ ತೋರಿಸಿದ್ದರು ಹೀಗಾಗಿಯೇ ಜನರಿಗೂ ಯಾವುದೇ ಸಮಸ್ಯೆ ಇರಲಿಲ್ಲ ಎಂಬುದು ಶಿಲ್ಪಾ ಡೇವ್ ಮಾತಾಗಿದೆ. ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದ ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಕೂಡ ನರ್ತಿಸಲು ನಿರಾಕರಿಸಿದರು ಎನ್ನಲಾಗಿದೆ.