ನಾಟಕ ರಂಗ – ಸಮಾಜಕ್ಕೆ ಕೊಡುಗೆಗಳು

ಜಗತ್ತಿನ ಪ್ರತಿನಿತ್ಯದ ಜೀವನ ಚಿತ್ರದಲ್ಲಿ ಕಂಡುಬರುವಂತಹ ಒಂದು ವಿಶೇಷ ಕಲೆಯೆಂದರೆ ಅಭಿನಯ. ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಕಲಾವಂತನಾಗಿರುತ್ತಾನೆ. ಜೀವನ ನಿರ್ವಹಣೆಯು ಕೂಡ ಒಂದು ರೀತಿಯ ಕಲಾಭಿನಯದ ಸುಂದರ ಹಂದರವಾಗಿದೆ.
ಅಂದಾಗ ಪ್ರತಿಯೊಬ್ಬ ಮನುಷ್ಯನಲ್ಲಿ ಕಲೆ ಅಂತರ್ಗತವಾಗಿ ಅಡಕವಾಗಿರುತ್ತದೆ ಎನ್ನುವುದು ಎಲ್ಲರೂ ಒಪ್ಪುಂತಹ ಮಾತಾಗಿದೆ. ಅದನ್ನು ಜಾಗೃತಗೊಳಿಸಿ, ಅದಕ್ಕೆ ಮುಕ್ತ ರೂಪವನ್ನು ಕೊಟ್ಟು ಹೊರಹಾಕಿದಾಗ, ಆ ವ್ಯಕ್ತಿಯಲ್ಲಡಗಿದ ವ್ಯಕ್ತಿತ್ವದ ಹಲವು ಮುಖಗಳು ಅಭಿವ್ಯಕ್ತಗೊಳ್ಳುತ್ತವೆ.


ಇಂಥ ಸಂದರ್ಭಗಳಲ್ಲಿ ಕಲೆ, ನಾಟಕ, ನೃತ್ಯ, ಸಾಹಿತ್ಯ, ಸಂಗೀತ, ಸಂಸ್ಕಂತಿಗಳು ಅವುಗಳಿಗೆ ಪೂರಕವಾಗಿ ನಿಲ್ಲುತ್ತವೆ. ಇವುಗಳಿಗೆ ಹೊಂದಿಕೊಂಡ ಮನುಷ್ಯ ತನ್ನ ಅಂತರ್ಗತ ಅಭಿಪ್ರಾಯಗಳಿಗೆ ಮುಕ್ತ ಅವಕಾಶ ಕೊಟ್ಟು, ಸೂಕ್ತ ರೀತಿಯಲ್ಲಿ ಬೆಳೆದು ನಿಲ್ಲುತ್ತಾನೆ. ಈ ಎಲ್ಲ ವಿಚಾರಗಳು ಕಾರ್ಯರೂಪಕ್ಕೆ ಬರಬೇಕಾದಲ್ಲಿ ಸಂಘಟನೆ ಅವಶ್ಯಕವಾಗಿದೆ.


ಸಂಘಟನೆಗಳು ವೇದಿಕೆಗಳನ್ನು ಒದಗಿಸಿಕೊಟ್ಟಾಗ ದೃಶ್ಯ ಮಾಧ್ಯಮಗಳು ಬೆಳೆದು ನಿಲ್ಲುತ್ತವೆ. ಆಗ ರಂಗಭೂಮಿ ಮತ್ತು ನಾಟಕಗಳು ಸಮಾಜದಲ್ಲಿ ಹಾಸುಹೊಕ್ಕಾಗಿ ಬೆಳೆದು ತನ್ನದೇ ಆದ ರೂಪವನ್ನು ತಾಳುತ್ತವೆ. ಜೊತೆಗೆ ಸಮಾಜಕ್ಕೆ ಸಂದೇಶವನ್ನು ಕೊಡುವ ನಿಟ್ಟಿನಲ್ಲಿ ಬೆಳೆದು ಮಾರ್ಗದರ್ಶಿಗಳಾಗಿ ನಾಟಕಗಳು ಪ್ರದರ್ಶನಗೊಳ್ಳುತ್ತವೆ.
ಭಾರತೀಯ ರಂಗಭೂಮಿ ಮತ್ತು ನಾಟಕದ ಮೂಲ ನೆಲೆ ಧರ್ಮವಾಗಿದೆ. ನಾಟಕದ ಪರಿಕಲ್ಪನೆ ಕುರಿತು ಮೊದಲಿಗೆ ಋಗ್ವೇದದಲ್ಲಿ ಉಲ್ಲೇಖವಾಗಿದೆ. ನಾಟಕ ಪಾಶ್ಚಾತ್ಯ ಮತ್ತು ಭಾರತೀಯ ಸಂಸ್ಕಂತಿಗಳೆರಡರಲ್ಲೂ ದೇವತೆಗಳ ಪ್ರೀತ್ಯರ್ಥ ಇಲ್ಲವೆ ಭೂತ-ಪ್ರೇತಗಳ ತೃಪ್ತಿಪಡಿಸುವ ಸಾಂಪ್ರದಾಯಕ ಹಾಡು ಕುಣಿತಗಳಾಗಿ ರೂಪಗೊಂಡು ಭಾಷೆಯನ್ನು ಬಳಸಿ, ಅಭಿನಯವನ್ನು ಬೆಳೆಸುತ್ತಾ ಬೆಳೆದು ಬಂದವು.


ಮುಂದೆ ದೇವತೆಗಳ ಪ್ರಾರ್ಥನೆಯ ಮೇರೆಗೆ ಬ್ರಹ್ಮನು ನಾಲ್ಕು ವೇದಗಳಿಂದ ಒಂದೊಂದು ಅಂಶವನ್ನು ತೆಗೆದು, ಅಂದರೆ ಋಗ್ವೇದದಿಂದ ಭಾಷೆಯನ್ನು, ಸಾಮವೇದದಿಂದ ಗೀತೆಯನ್ನು, ಯಜುರ್ವೇದದಿಂದ ಅಭಿನಯವನ್ನು, ಅಥರ್ವಣ ವೇದದಿಂದ ರಸಗಳನ್ನು ಆಯ್ದುಕೊಂಡು ನಾಟ್ಯವೇದವೆಂಬ ಐದನೇ ವೇದವನ್ನು ರಚಿಸುವಂತೆ ಬೋಧಿಸಿದನು ಎನ್ನುವುದು ಒಂದು ದಂತ ಕಥೆಯಾಗಿ ರೂಪುಗೊಂಡಿದೆ. ಅಲ್ಲದೇ ಭರತನು ತನ್ನ ನಾಟ್ಯಶಾಸ್ತ್ರದಲ್ಲಿ ಭರತಖಂಡ ನಾಟಕಕ್ಕೆ ಪರಶಿವನೆ”ಆದಿಪುರುಷ. ಆತನಿಗೆ ನಟೇಶ, ನಟರಾಜ, ನಟನಾಥ ಎಂಬ ಪರ್ಯಾಯ ನಾಮಗಳಲ್ಲದೆ ಮಹಾನಟ, ಆದಿನಟ ಎಂಬ ಬಿರುದುಗಳಿವೆ ಎಂಬುದನ್ನು ಉಲ್ಲೇಖಿಸಿದ್ದಾನೆ.
ಈ ಹಿನ್ನೆಲೆಯನ್ನು ಹೊಂದಿರುವ ಭಾರತೀಯ ನಾಟಕ ಸಾಹಿತ್ಯ ಚರಿತ್ರೆಯು, ಕನ್ನಡ ನಾಟಕ ಇತಿಹಾಸವನ್ನು ತಿಳಿಸುವಲ್ಲಿಯೂ ವಿಶೇಷತೆಯನ್ನು ಉಳಿಸಿಕೊಂಡಿದೆ. ಶ್ರೀಹರ್ಷನ ಲೌಕಿಕ ರತ್ನಾವಳಿ ನಾಟಕದ ರೂಪಾಂತರವೆಂದು ಹೇಳಲ್ಪಡುವ ಸಿಂಗರಾರ್ಯರ ಮಿತ್ರವಿಂದಾ ಗೋವಿಂದಾ”ನಾಟಕವು ೧೭ನೇ ಶತಮಾನದಲ್ಲಿ ಕನ್ನಡದ ಮೊದಲ ನಾಟಕ ಎಂಬ ಹೆಗ್ಗಳಿಕೆಯನ್ನು ಪಡೆಯುವದರೊಂದಿಗೆ, ಇದೊಂದು ಸ್ವತಂತ್ರ ಕೃತಿ ಎನ್ನಿಸಿಕೊಳ್ಳುವ ಎಲ್ಲ ಗುಣಲಕ್ಷಣಗಳನ್ನು ಹೊಂದಿ ಪ್ರಬುದ್ಧವಾಗಿ ಮೂಡಿ ಬಂದಿದೆ. ಈ ರೀತಿಯಾಗಿ ನಾಟಕ ಕ್ಷೇತ್ರ ಸಮೃದ್ಧವಾಗಿ ಬೆಳೆಯುತ್ತಾ ತನ್ನ ಸ್ಥಾನವನ್ನು ಭದ್ರಗೊಳಿಸಿಕೊಂಡು ಬೆಳೆಯಿತು.


ಸಮಾಜಕ್ಕೆ ಕೊಡುಗೆಗಳು: ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ಜನಪದ ರಂಗಭೂಮಿ, ಬಯಲಾಟ, ದೊಡ್ಡಾಟ, ಸಣ್ಣಾಟ, ದಬ್ಬಿನಾಟ, ಯಕ್ಷಗಾನ ಹಲವು ಕವಲುಗಳಾಗಿ ಬೆಳೆದ ಈ ರಂಗಭೂಮಿ ಕ್ಷೇತ್ರ, ಸಮಾಜದ ಒಳಿತಿಗಾಗಿ ನಮ್ಮ ನಾಡು-ನುಡಿ-ನೆಲ-ಜಲ ಸಂಗೀತ, ಸಾಹಿತ್ಯ ಸಂಸ್ಕಂತಿಗಳ ರಕ್ಷಣೆಗಾಗಿ ನಿರಂತರ ಶ್ರಮಿಸುತ್ತಲೇ ಬಂದಿದೆ. ಹಿಂದೆ, ರಾಜ ಮಹಾರಾಜರಿಂದ, ಇಂದು ಸರಕಾರದಿಂದ ಮತ್ತು ಹತ್ತು ಹಲವಾರು ಧಾರ್ಮಿಕ ಕೇಂದ್ರಗಳಿಂದ ರಕ್ಷಣೆಗೊಳಗಾಗಿರುವ ಲಲಿತ ಕಲಾಕ್ಷೇತ್ರ, ಸಂಗೀತ, ಸಾಹಿತ್ಯ ಪರಂಪರೆಗಳನ್ನು ಬೀರಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮದೇ ಆದ ಕೊಡುಗೆಗಳನ್ನು ಕೊಡುತ್ತಲಿದೆ. ಇವುಗಳಲ್ಲಿ ದೃಶ್ಯ, ಶ್ರಾವ್ಯ ಮತ್ತು ಸಂಭಾಷಣಾಯುಕ್ತವಾದ ನಾಟಕ ಮಾಧ್ಯಮ ನೇರವಾಗಿ ನೋಡುಗರ ಮೇಲೆ ಪರಿಣಾಮ ಬೀರಿ ಹೆಚ್ಚಿನ ಪ್ರಭಾವವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಸಮಾಜದ ಓರೆಕೋರೆಗಳನ್ನು ಕಥಾವಸ್ತುಗಳನ್ನಾಗಿಟ್ಟುಕೊಂಡು ಒಂದು ಉತ್ತಮವಾದ ಸಂದೇಶವನ್ನು ಬೀರುವಲ್ಲಿ ರಂಗಭೂಮಿ ತನ್ನದೇ ಆದ ವಿಶಿಷ್ಟ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಲೇ ಬಂದಿದೆ. ಸಮುದಾಯದ ಮಾಧ್ಯಮದಲ್ಲಿಯೇ ಹುಟ್ಟಿ ಸಮುದಾಯದ ಹಿತ ಚಿಂತನೆ ಮಾಡುತ್ತಾ ಬೆಳೆದು, ಸಮುದಾಯದ ಒಂದು ಅಂಗವಾಗಿ ಪ್ರಕಾಶಿಸುತ್ತಿರುವ ರಂಗಭೂಮಿ ನಿತ್ಯ ನೂತನವಾಗಿ, ನಾಟಕ ಕೃತಿ ಸಾಹಿತ್ಯರೂಪದಿಂದ ರಂಗರೂಪಕ್ಕೆ ಬಂದಾಗ ಅದು ನಮ್ಮನ್ನು ವೃಷ್ಟಿ ಮಾಧ್ಯಮದಿಂದ ಸಮಷ್ಟಿ ಮಾಧ್ಯಮಕ್ಕೆ ಕರೆದೊಯ್ಯುತ್ತದೆ.
ಸಂಕೀರ್ಣದ ಕಲೆಯಾದ ನಾಟಕ, ಚತುರ್ಮುಖ ಅಭಿನಯಗಳಿಂದ ನವರಸ ಪೂರಕವಾಗಿ ವೇಷಭೂಷಣಗಳೊಂದಿಗೆ ರಂಗದಲ್ಲಿ ಮಿಂಚುವುದರಿಂದ, ಪ್ರೇಕ್ಷಕರ ಮನಮಂದಿರಗಳಿಗೆ ನೇರವಾಗಿ ಲಗ್ಗೆ ಇಟ್ಟು, ಪರಿಣಾಮಗಳನ್ನು ಕೊಡುವಲ್ಲಿ ಸಾಧನೆಗೈದಿದೆ. ಮಹಾತ್ಮರ, ಶರಣ ಸತ್ಪುರುಷರ, ದಾರ್ಶನೀಕರ, ಮಹಾಮೇಧಾವಿಗಳ, ವಿಜ್ಞಾನಿಗಳ ಸಂತರ ಜೀವನ ಚರಿತಾಮೃತಗಳನ್ನು ಅಭಿನಯದ ಮುಖಾಂತರ ಪ್ರೇಕ್ಷಕರ ಮನಸೂರೆಗೊಳ್ಳುವ ಘಟನೆಗಳು ಅವರ ಮಾನಸಿಕ ತಮಂಧತೆಯ ನಿವಾರಣೆಗೆ ಹಾಗೂ ದುರ್ವಿಚಾರಗಳ ನಿರ್ನಾಮಕ್ಕೆ ದಾರಿಯಾಗಿ, ಬದಲಾವಣೆಯ ಬೆಳಕನ್ನು ಮೂಡಿಸುವಲ್ಲಿ ಬಹು ಮಹತ್ತರ ಪಾತ್ರ ವಹಿಸುತ್ತಲೇ ಬಂದಿವೆ.
ಪೌರಾಣಿಕ, ಐತಿಹಾಸಿಕ ಹಿನ್ನೆಲೆಗಳನ್ನು ಹೊತ್ತು ಪ್ರದರ್ಶನಗೊಳ್ಳುವ ನಾಟಕಗಳಂತೂ ನಮ್ಮ ಪೀಳಿಗೆಗೆ ಹಿಂದಿನ ಇತಿಹಾಸವನ್ನು ಮರುಕಳಿಸಿ ನೆನಪಿಸಿಕೊಡುತ್ತವೆ. ಮಹತ್ ಗ್ರಂಥಗಳನ್ನು ಸಣ್ಣ ಸಣ್ಣ ಪುಸ್ತಕಗಳನ್ನು ಓದಲು ಹಿಂಜರಿಯುವ ನಮ್ಮ ಜನಾಂಗಕ್ಕೆ, ನಾಟಕಗಳು ಪ್ರಾತ್ಯಕ್ಷಿಕೆಯನ್ನು ಮಾಡಿಕೊಡುವುದರಿಂದ ಗ್ರಂಥಗಳ ಒಳಾರ್ಥವನ್ನು, ಚಿಂತನೆಗಳನ್ನು ನೋಡುಗರು ಅರ್ಥೈಸಿಕೊಳ್ಳುವಂತೆ ಮಾಡುತ್ತವೆ.
ಗಾಂಧೀಜಿಯವರು ಬಾಲ್ಯದಲ್ಲಿ ”ಸತ್ಯಹರಿಶ್ಚಂದ್ರ” ಮತ್ತು ಶ್ರವಣಕುಮಾರ ನಾಟಕಗಳನ್ನು ನೋಡಿ, ಸತ್ಯದ ಮಹತ್ವ ಮತ್ತು ತಂದೆ-ತಾಯಿಗಳ ಮೇಲೆ ನಾವಿಡಬೇಕಾದ ಭಕ್ತಿ-ಪ್ರೀತಿ-ಗೌರವಗಳನ್ನು ಅರ್ಥೈಸಿಕೊಂಡೆ, ಎನ್ನುವ ಅವರ ಮಾತು ಆತ್ಮ ಚರಿತ್ರೆಯಲ್ಲಿ ನಿರೂಪಗೊಂಡದ್ದು ಇತಿಹಾಸವಾಗಿದೆ. ಬಾಲ್ಯದಲ್ಲಿಯೇ ನಾಟಕದ ಪ್ರಭಾವದಿಂದ ಆತ್ಮಬಲ ಪಡೆದುಕೊಂಡ ಒಬ್ಬ ಬಾಲಕ, ಮುಂದೆ ರಾಷ್ಟ್ರಪಿತ”ಎನ್ನಿಸಿಕೊಳ್ಳಬೇಕಾದಲ್ಲಿ ಇನಿತಾದರೂ ಅದು ಸಹಕಾರಿಯಾಗಿದೆ ಎನ್ನುವುದಾದರೆ, ಇದು ಕೂಡ ಸಮಾಜಕ್ಕೆ ಒಂದು ಮಹತ್ತರ ಕೊಡುಗೆಯಾಗಿದೆ. ಮಹಾತ್ಮಾ ಗಾಂಧೀಜಿಯವರದೊಂದು ಉದಾಹರಣೆಯಾಗಿ ಬಳಸಿದರೂ, ಇಂತಹ ಹಲವು ಘಟನೆಗಳು ಇತಿಹಾಸದ ಪುಟಗಳಲ್ಲಡಕವಾಗಿವೆ.
ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಹೋರಾಟಗಾರರಿಗೆ ರಕ್ಷಣೆ ಕೊಟ್ಟು ಪೋಷಿಸಿರುವಂತಹ ಹಲವು ಉದಾಹರಣೆಗಳು ವೃತ್ತಿ ರಂಗ ನಾಟಕ ಕಂಪನಿಗಳಲ್ಲಿ ನಿರಂತರವಾಗಿ ನಡೆಯುತ್ತಲೇ ಬಂದಿವೆ. ಅಲ್ಲದೇ ದೇಶಾಭಿಮಾನವನ್ನು ಬೀರುವಂತಹ ಚರಿತ್ರೆಗಳನ್ನು ಆಯ್ದುಕೊಂಡು ನಾಟಕವಾಡಿ ನೋಡುಗರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ತಯಾರು ಮಾಡುವ ಗರಡಿ ಶಾಲೆಗಳಾಗಿಯೂ ರಂಗಭೂಮಿಗಳು ಸಂಘಟನೆಯನ್ನು ಮಾಡಿವೆ.
“ಬೆಟ್ಟ ನಮ್ಮ ಮುಂದೆ ಎಂದೂ ಬಾಗುವುದಿಲ್ಲವಾದರೂ, ಕಷ್ಟಪಟ್ಟು ನಾವು ಆ ಬೆಟ್ಟವನ್ನು ಹತ್ತಿದರೆ ಅದು ನಮ್ಮ ಪಾದದ ಕೆಳಗಿರುತ್ತದೆ”ಎನ್ನುವ ಜೀವನ ಮರ್ಮವನ್ನು ಬಹುಸೂಚ್ಯವಾಗಿ ಬಿಂಬಿಸಿ, ಜನಜಾಗೃತಿಯನ್ನು ಮಾಡುವಲ್ಲಿ ನಾಟಕ ಮಾಧ್ಯಮ ವಿಶೇಷ ಸೇವೆಯನ್ನು ಸಲ್ಲಿಸಿದೆ. ಮೇಲುಕೀಳುಗಳ ತಾರತಮ್ಯದ ಫಲವೇನೆಂಬುದನ್ನು ಅಭಿಮಾನ ಶೂನ್ಯತೆಯಿಂದ, ಒಳಜಗಳಗಳಿಂದ ಮೂರನೆಯವನಿಗೆ ಲಾಭವಾಗುವುದೆಂಬ ಸತ್ಯವನ್ನು ನಾಟಕಗಳ ಮುಖಾಂತರ ತೋರಿಸಿ ದೇಶಾಭಿಮಾನದ ಬೀಜವನ್ನು ನೋಡುಗರಲ್ಲಿ ಬಿತ್ತುವ ಕಾರ್ಯ ಮಾಡಿದ್ದು ಶ್ಲಾಘನೀಯವಾಗಿದೆ.
ಪ್ರಸ್ತುತ ಸಮಾಜದಲ್ಲಿ ಕಗ್ಗಂಟಾಗಿ ಬೆಳೆಯುತ್ತಲಿರುವ ಮಾನಸಿಕ ತುಮುಲತೆಯನ್ನು, ಕಂದಾಚಾರಗಳನ್ನು ಹೋಗಲಾಡಿಸುವಂತಹ ಅರ್ಥಪೂರ್ಣ ನಾಟಕಗಳ ಪ್ರದರ್ಶನಗಳೊಂದಿಗೆ, ಜನರ ಮನಗಳಿಗೆ ಬೆಳದಿಂಗಳ ಬೀರುವ ಕಾರ್ಯ ನಡೆಯುತ್ತಲೇ ಇದೆ.
ಕತ್ತಲೆಯಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಅಧರ್ಮದಿಂದ ಧರ್ಮದ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ, ಮಾನವ ಪಥ ಚಲಿಸುವಂತಹ ಬಹು ಮಾರ್ಮಿಕವಾದ ಸಂದೇಶಗಳನ್ನು ಬೀರುತ್ತ, ಜನಾಕರ್ಷಣೆಯ ಕೇಂದ್ರ ಬಿಂದುಗಳಾಗಿ ತಮ್ಮದೇ ಆದ ಕೆಲಸ ಮಾಡುವುದರೊಂದಿಗೆ, ಮನರಂಜನೆಯ ಮಾಧ್ಯಮವಾಗಿಯೂ ಇಂದು ಸಮಾಜದಲ್ಲಿ ನಾಟಕ ಎನ್ನುವುದು ಹಾಸು ಹೊಕ್ಕಾಗಿದೆ. ಸರಕಾರಿ ಯೋಜನೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ಎಲ್ಲರಿಗೆ ಅರ್ಥವಾಗುವಂತಹ ಸರಳ ಮಾರ್ಗವಾದ ನಾಟಕ ಪ್ರದರ್ಶನಗಳ ಮುಖಾಂತರ ಆಯೋಜನೆಗಳು ಪ್ರಭಾವ ಬೀರುತ್ತಲಿರುವುದೂ ಹಿರಿಮೆಯಾಗಿದೆ.


ಆಧುನಿಕತೆಯ ಯಾಂತ್ರೀಕರಣಕ್ಕೆ ಮನಸೋತ ಜನ ಟಿವಿ, ಸಿನೇಮಾ ಲೋಕದಲ್ಲಿ ಮುಳುಗಿ, ರಂಗಭೂಮಿಯನ್ನು ಮರೆಯುವಂತಹ ಸ್ಥಿತಿ ನಿರ್ಮಾಣವಾದರೂ ಕೂಡ, ಹಲವಾರು ಗಟ್ಟಿ ರಂಗ ಸಂಸ್ಥೆಗಳು ಇಂದಿಗೂ ತಮ್ಮ ರಂಗ ಚಟುವಟಿಕೆಗಳನ್ನು ನಿಲ್ಲಿಸಿಲ್ಲ ಎನ್ನುವುದು ಸತ್ಯವಾದರೂ, ಕಲಾವಿದರ ಬದುಕು ಕರುಣಾಮಯವಾದದ್ದು ಕೂಡ ಕಣ್ಣೆದುರಿಗಿದೆ ಎನ್ನುವ ಸತ್ಯವಾದ ಸಂಗತಿಯಾಗಿದೆ. ಒಟ್ಟಾರೆ ರಂಗಭೂಮಿ ಮತ್ತು ನಾಟಕ ಸಮಾಜದ ಹಿತಚಿಂತನೆಗೈಯುವಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಲೇ ಇದೆ. ಎನ್ನುವುದು ಎಲ್ಲರೂ ಒಪ್ಪುವ ಮಾತಾಗಿದೆ.

-ಶ್ರೀ ಗದಿಗೆಯ್ಯ ವಿ. ಹಿರೇಮಠ, ಹುಬ್ಬಳ್ಳಿ