ನಾಟಕ ಪರಂಪರೆಯ ಐತಿಹಾಸಿಕ ವ್ಯಕ್ತಿ ಏಣಗಿ ಬಾಳಪ್ಪ


ಧಾರವಾಡ,ಮಾ.28: ನಾಟ್ಯಭೂಷಣ ಏಣಗಿ ಬಾಳಪ್ಪನವರು ಕರ್ನಾಟಕದ ನಾಟಕದ ಪರಂಪರೆಗೆ ಪ್ರಭಾವ ಬೀರಿದ ಐತಿಹಾಸಿಕ ಕಾರಣಪುರುಷರು. ಇಂತಹ ಸರ್ವಶ್ರೇಷ್ಠ ಕಲಾವಿದರಾದ ನಾಟ್ಯಭೂಷಣ ಏಣಗಿ ಬಾಳಪ್ಪನವರು, ನಾಟ್ಯಭೂಷಣ, ನಾಡೋಜ, ಡಾ ಏಣಗಿ ಬಾಳಪ್ಪನವರ ಸಂಸ್ಮರಣೆಯನ್ನು ಮಾಡಲು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದತ್ತಿಯನ್ನು ಇರಿಸಿದ್ದು ಶ್ಲಾಘನೀಯ. ಕನ್ನಡದ ಗುಡಿ ಕರ್ನಾಟಕ ವಿದ್ಯಾವರ್ಧಕ ಸಂಘ ಇತ್ತೀಚಿನ ದಿನಗಳಲ್ಲಿ ಎಲ್ಲ ಕಾರ್ಯಕ್ರಮಗಳಂತೆ ದತ್ತಿ ಕಾರ್ಯಕ್ರಮಗಳನ್ನೂ ಕೂಡಾ ಹೆಚ್ಚಿನ ಮಹತ್ವ ನೀಡಿ ಇಡೀ ದೇಶದಲ್ಲಿಯೆ ಮಾದರಿ ಎನ್ನುವಂತೆ ಆಯೋಜಿಸಿ ಅರ್ಥಪೂರ್ಣ ಮತ್ತು ಯಶಸ್ವಿ ಕಾರ್ಯಕ್ರಮಗಳಾಗಿ ಆಚರಿಸುತ್ತಿದೆ. ಇದೇ ರೀತಿ ದತ್ತಿ ಕಾರ್ಯಕ್ರಮಗಳು ಇಷ್ಟೊಂದು ಆಕರ್ಷಕ ಮತ್ತು ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು ಬೇರೆಲ್ಲೂ ನಾ ಕಾಣೆ ಮತ್ತು ಈ ಕುರಿತು ಸಂಘದ ಪದಾಧಿಕಾರಿಗಳ ಮುತುವರ್ಜಿ ಮತ್ತು ಪರಿಶ್ರಮ ಪ್ರಶಂಸನೀಯ ಎಂದು ಖ್ಯಾತ ಸಾಹಿತಿ ಡಾ. ಗುರುಲಿಂಗ ಕಾಪಸೆ ಅವರು ಹೇಳಿದರು
ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಾಡೋಜ ಡಾ. ಏಣಗಿ ಬಾಳಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಏಣಗಿ ಬಾಳಪ್ಪ ಅವರನ್ನು ಯುಗಪುರುಷರೆಂದೆ ಕರೆಯಬೇಕಾಗುತ್ತದೆ, ಹೇಮರಡ್ಡಿ ಮಲ್ಲಮ್ಮ ನಾಟಕದಲ್ಲಿ ಮಲ್ಲಮ್ಮನ ಪಾತ್ರ, ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಸವಣ್ಣನ ಪಾತ್ರ ಇವೆಲ್ಲವೂ ಅವರ ಚಾರಿತ್ರಿಕ ದಾಖಲೆಗಳಾಗಿ ನಾಟಕ ಇತಿಹಾಸದ ಪರಂಪರೆಯಲ್ಲಿ ಸೇರಿಕೊಂಡಿವೆ ಎಂದು ಅವರು ಹೇಳಿದರು. ನಾಟಕದಲ್ಲಿಯ ಪಾತ್ರ ಎಂದರೆ ಪರಕಾಯ ಪ್ರವೇಶ ಆದ ಹಾಗೆ 12 ನೇ ಶತಮಾನದ ಬಸವಣ್ಣನವರನ್ನು ತಮ್ಮ ನಾಟಕದ ಮೂಲಕ ಆ ವ್ಯಕ್ತಿಯನ್ನು ಪ್ರೇಕ್ಷಕರ ಮುಂದೆ ಜೀವಂತವಾಗಿ ತಂದು ತೋರಿಸುವ ಸಾಮಥ್ರ್ಯ ಇದ್ದದ್ದು ಬಾಳಪ್ಪನವರಲ್ಲಿ ಎಂದು ಡಾ. ಕಾಪಸೆ ವರ್ಣಿಸಿದರು.
ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷ ಡಾ. ಶಾಂತಿನಾಥ ದಿಬ್ಬದ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ, ಸಹಕಾರ್ಯದರ್ಶಿ ಸದಾನಂದ ಶಿವಳ್ಳಿ, ಡಾ. ವಿಜಯಕುಮಾರ ಗಿಡ್ನವರ, ಡಾ. ಶಶಿಧರ ಕಟಕೋಳ, ಬಸವರಾಜ ಏಣಗಿ, ಸುಭಾಸ ಏಣಗಿ, ಅರವಿಂದ ಏಣಗಿ, ರಾಜು ಏಣಗಿ, ವಿಜಯ ಏಣಗಿ ಮತ್ತು ಶ್ರೀಮತಿ ಪೂರ್ವಾ ತಿಪ್ಪನಗೌಡರ, ಬಸವರಾಜ ಕುನ್ನೂರ, ಮಹೇಂದ್ರ ತಿಪ್ಪನಗೌಡರ, ರಾಮಚಂದ್ರ ಧೋಂಗಡೆ ಹಾಗೂ ಏಣಗಿ ಪರಿವಾರದವರು, ಅಭಿಮಾನಿಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.