ನಾಟಕ ನೋಡಿ ನಕ್ಕು ನಲಿದ ಕಪ್ಪಗಲ್ಲು ಗ್ರಾಮದ ಜನತೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.16: ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಳ್ಳಾರಿ ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಕಪ್ಪಗಲ್ಲು ನಾಟಕೋತ್ಸವ’ದ ಮೊದಲ ದಿನ ದಿ. 14ರ ಸಂಜೆ ನಡೆದ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕವನ್ನು ನೋಡಿದ ಕಪ್ಪಗಲು ಗ್ರಾಮದ ಜನತೆ ಆರಂಭದಿಂದ ಕೊನೆಯವರೆಗಿನ ಹಾಸ್ಯ ಸನ್ನಿವೇಶಗಳಿಂದ ನಕ್ಕು ನಲಿದಾಡಿದರು.
ಬಳ್ಳಾರಿಯ ಹಾಗೂ ಜೋಳದರಾಶಿ ಪ್ರತಿಷ್ಟಾನ ಹಾಗೂ ರಂಗತೋರಣ ಸಂಸ್ಥೆಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಾಮದ ಸನ್ಮಾರ್ಗ ಗೆಳೆಯರ ಬಳಗ, ವೀರಶೈವ ತರುಣ ಸಂಘ, ಶ್ರೀ ಗಾದಿಲಿಂಗೇಶ್ವರ ಸೇವಾ ಟ್ರಸ್ಟ್, ಶ್ರೀ ವಾಲ್ಮೀಕಿ ಯುವಕ ಸಂಘ, ಡಾ|| ಬಿ.ಆರ್.ಅಂಬೇಡ್ಕರ್ ಯುವಕ ಸಂಘಗಳ ಸಹಕಾರದೊಂದಿಗೆ ಜನವರಿ 14 ರಿಂದ ಮೂರು ದಿನಗಳ ‘ಕಪ್ಪಗಲ್ಲು ನಾಟಕೋತ್ಸವ’ ಹಮ್ಮಿಕೊಳ್ಳಲಾಗಿದೆ. ಗ್ರಾಮದ ಬಯಲು ರಂಗಮಂದಿರವನ್ನು ಇನ್ನಷ್ಟು ವಿಸ್ತರಿಸಿ ಪರದೆ, ಬಣ್ಣದ ಲೈಟುಗಳಿಂದ ಸಿಂಗರಿಸಲಾಗಿತ್ತು.
ನಾಟಕೋತ್ಸವನ್ನು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರಿನ ನಿಕಟಪೂರ್ವ ಅಧ್ಯಕ್ಷರಾದ ಪ್ರೊ.ಆರ್. ಭೀಮಸೇನ ವಾದ್ಯ ಬಾರಿಸುವುದರೊಂದಿಗೆ ಉದ್ಘಾಟಿಸಿದರು. ಈ ನಾಟಕೋತ್ಸವವನ್ನು ಕಪ್ಪಗಲ್ಲು ಗ್ರಾಮದ ಜನತೆ ಊರ ಹಬ್ಬದಂತೆ ಸಂಭ್ರಮಿಸುತ್ತಿದೆ. ಗ್ರಾಮೀಣ ಜನತೆಗೆ ಅಪರೂಪವಾಗಿರುವ ವಿದ್ಯಾವಂತ ಹವ್ಯಾಸಿ ಕಲಾವಿದರು ಅಭಿನಯಿಸುವ ಮೂರು ವಿಭಿನ್ನ ನಾಟಕಗಳು ಕಪ್ಪಗಲ್ಲಿಗೆ ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸಿದೆ. ನಾಟಕೋತ್ಸವ ನಡೆಸಲು ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಇಲ್ಲಿಯ ಕನ್ನಡದ ಕಟ್ಟಾಳುಗಳಾದ ಚಂದ್ರಶೇಖರ ಆಚಾರ್, ಮುಖ್ಯೋಪಾಧ್ಯಾಯ ಮೆಹತಾಬ್, ಅನಿಲ್ ಅಂಗಡಿ ಅವರುಗಳೊಂದಿಗೆ ಸ್ಥಳೀಯ ಸಂಘ ಸಂಸ್ಥೆಗಳ ಯುವಕರು ಸಹಕಾರ ನೀಡಿರುವುದು ಪ್ರಶಂಶನೀಯವೆಂದರು. ವೇದಿಕೆಯ ಮೇಲೆ ಹಾಜರಿದ್ದ ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳೆಲ್ಲರನ್ನು ಶಾಲು-ಹೂ ನೀಡಿ ಸನ್ಮಾನಿಸಲಾಯಿತು.
ನಂತರ ಸಿರಿಗೆರೆಯ ‘ಧಾತ್ರಿ ರಂಗ ಸಂಸ್ಥೆ’ ಯಿಂದ ಹಾಸ್ಯ ನಾಟಕ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಡೆಯಿತು. ಮುದ್ದಣ್ಣ ಒಬ್ಬ ಅಮಾಯಕ ನೌಕರ. ತನ್ನದೇ ಸಂಸ್ಥೆಯಲ್ಲಿ ಒಂದು ಪ್ರಮೋಷನ್ ಪಡೆಯಲು ಪಡುವ ಪಡಿಪಾಟಲನ್ನು ಹಾಗೂ ತಪ್ಪುದಾರಿ ತುಳಿದರೆ ಆಗುವ ಆನಾಹುತವನ್ನು ತಿಳಿಸುವ ಈ ನಾಟಕದಲ್ಲಿ ಬರುವ ಜನಪ್ರಿಯ ಹಾಡುಗಳು, ಹಾಸ್ಯ ಪ್ರಸಂಗಗಳನ್ನು ಎಲ್ಲ ಕಲಾವಿದರು ಅತ್ಯಂತ ಸಹಜವಾಗಿ ಲವಲವಿಕೆಯಿಂದ ಅಭಿನಯಿಸಿದ್ದು ಗ್ರಾಮ ಜನತೆ ಕಿಕ್ಕಿರಿದು ತುಂಬಿ ಆನಂದಿಸಿದರು. ಹಾಸಿದ ಜಮಖಾನೆ ಮೇಲೆ, ಮನೆಗಳ ಕಟ್ಟೆ ಮೇಲೆ, ಚಕ್ಕಡಿ ಬಂಡಿಗಳ ಮೇಲೆ, ಗುಡಿ ಕಟ್ಟೆಗಳ, ಮನೆಗಳ ಮೇಲೆ, ಗಿಡ ಕಟ್ಟೆಗಳಲ್ಲೆಲ್ಲ ಮಕ್ಕಳು, ಮಹಿಳೆಯರು, ರೈತರು ನಾಗರಿಕರು ತುಂಬಿತುಳುಕುವ ದೃಶ್ಯ ಕಪ್ಪಗಲ್ಲು ನಾಟಕೋತ್ಸವ ಯಶಸ್ವಿ ಆರಂಭದ ಮುನ್ಸೂಚನೆ ಆಗಿತ್ತು.
ಕಾರ್ಯಕ್ರಮವನ್ನು ರಂಗತೋರಣದ ಸಹಕಾರ್ಯದರ್ಶಿ ಅಡವಿಸ್ವಾಮಿ ನಿರೂಪಿಸಿದರು. ಉಪನ್ಯಾಸಕ ಕೆ.ಎಂ.ವೀರೇಶ ಎಲ್ಲ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಮೆಹತಾಬ್ ಅವರು ವಂದಿಸಿದರು, ಜೋಳದರಾಶಿ ಪೊಂಪನಗೌಡ ಪ್ರಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಸದಸ್ಯರಾದ ಓಂಕಾರಪ್ಪ, ಶಾಂತಕುಮಾರ, ರಾಮಣ್ಣ, ಕೆ.ವೀರೇಶ, ರಾಮಾಂಜಿನೇಯ, ಗಾದಿಲಿಂಗಪ್ಪ, ಅರಕೇರಿ ಸದಾಶಿವ, ಜಡೇಸ್ವಾಮಿ, ಹುಸೇನ ಸಾಬ್, ಬಸವರಾಜ, ಎಸ್.ಡಿ.ಎಂ.ಸಿ.ಯ ನಾಗೇಂದ್ರ, ಪೊಂಪಣ್ಣ ಹಾಜರಿದ್ದರು.