ನಾಟಕ ಕಲೆಯು ನಿರಂತರ ಪ್ರಯೋಗ

ಕಲಬುರಗಿ.ಜ.6:ಯಾವ ಕಲೆಯು ಪರಿಪೂರ್ಣವಲ್ಲ. ನಾಟಕ ಕಲೆಯಲ್ಲಿ ನಿರಂತರವಾಗಿ ಪ್ರಯೋಗ, ಬದಲಾವಣೆ ಹಾಗೂ ಕಲಿಕೆ ಇರುತ್ತದೆ ಎಂದು ಕಲಬುರಗಿಯ ಹಿರಿಯ ಲೇಖಕಿ, ನಟಿ ಮತ್ತು ವಿಮರ್ಶಕಿ ಸಂಧ್ಯಾ ಹೊನಗುಂಟಿಕರ್ ಅವರು ಅಭಿಪ್ರಾಯಪಟ್ಟರು.
ನಗರದ ರಂಗಾಯಣ ಆಡಿಟೋರಿಯಂನಲ್ಲಿ ಬುಧವಾರ ಪತ್ರಕರ್ತರಿಗೆ ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಎರಡನೇ ದಿನದ ‘ರಂಗ ವಿಮರ್ಶಾ ಕಮ್ಮಟ’ ಕಾರ್ಯಕ್ರಮದ ವಿಚಾರ ಗೋಷ್ಠಿಯಲ್ಲಿ ‘ರಂಗ ಪ್ರಯೋಗ ಕೇಂದ್ರಿತ ವಿಮರ್ಶೆ’ ವಿಷಯ ಕುರಿತು ಸಂಧ್ಯಾ ಹೊನಗುಂಟಿಕರ್ ಅವರು ತಮ್ಮ ವಿಚಾರವನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಕಲಬುರಗಿ ವಿಶ್ವರಂಗ ವತಿಯಿಂದ ಏಕ ವ್ಯಕ್ತಿ ರಂಗಪ್ರಯೋಗ ‘ಅವ್ಯಕ್ತ’ ನಾಟಕ ಪ್ರದರ್ಶಿಸಲಾಯಿತು
ಸಮಾರೋಪ ಸಮಾರಂಭದ ಭಾಷಣ ಮಾಡಿದ ಬೆಂಗಳೂರಿನ ಹಿರಿಯ ರಂಗಕರ್ಮಿ ಡಾ. ರಾಜಪ್ಪ ದಳವಾಯಿ ಅವರು, ರಂಗಭೂಮಿ ಮತ್ತು ಪತ್ರಿಕೋದ್ಯಮ ಎರಡೂ ಕ್ಷೇತ್ರಗಳು ಕೇವಲ ಆಕರ್ಷಣೆಯಲ್ಲ. ಸಮಾಜದಲ್ಲಿ ಅತ್ಯಂತ ಜವಾಬ್ದಾರಿ ಮತ್ತು ಕ್ರಿಯಾಶೀಲ ಪಾತ್ರ ನಿರ್ವಹಿಸುವ ಮಾಧ್ಯಮಗಳಾಗಿವೆ. ರಂಗಭೂಮಿಗೆ ಪ್ರವೇಶಿಸಲು ಎಲ್ಲರಿಗೂ ಅವಕಾಶವಿದ್ದು, ರಂಗಭೂಮಿಯಿಂದ ಜೀವನ ನಿರ್ವಹಿಸುವ ಸಾಮಥ್ರ್ಯವನ್ನು ತಾವೂ ಬೆಳೆಸಿಕೊಂಡಿದ್ದಾಗಿ ವಿವರಿಸಿದರು.
ಸಮಾರೋಪ ಸಮಾರಂಭದಲ್ಲಿ ಮೈಸೂರಿನ ಹಿರಿಯ ಪತ್ರಕರ್ತ ಡಾ.ಗಣೇಶ ಅಮೀನಗಡ, ರಂಗ ಸಮಾಜ ಸದಸ್ಯ ಪ್ರಭುದೇವ ಕಪಗಲ್, ನಾಟಕ ಅಕಾಡೆಮಿಯ ಸದಸ್ಯ ಪ್ರವೀಣ ರಾಠೋಡ್, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ, ರಂಗಾಯಣದ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಇದ್ದರು. ರಂಗಾಯಣದ ಕಲಾವಿದೆ ಅಕ್ಷತಾ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿದರು.