ನಾಟಕ ಕಟ್ಟಲು ಮಾನಸಿಕ, ಆರ್ಥಿಕ, ದೈಹಿಕ ತಯಾರಿ:ಪ್ರೊ. ಭೀಮಸೇನ್ ಆರ್.

ಕಲಬುರಗಿ.ಜ.5:ನಾಟಕ ಕಟ್ಟಲು ಮಾನಸಿಕ, ಆರ್ಥಿಕ ಮತ್ತು ದೈಹಿಕವಾಗಿ ಸಾಕಷ್ಟು ತಯಾರಿಯಾಗಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಪೆÇ್ರ. ಭೀಮಸೇನ.ಆರ್ ಅವರು ಅಭಿಪ್ರಾಯಪಟ್ಟರು.
ನಗರದ ರಂಗಾಯಣ ಆಡಿಟೋರಿಯಂನಲ್ಲಿ ಮಂಗಳವಾರ ಪತ್ರಕರ್ತರಿಗೆ ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಎರಡು ದಿನಗಳ ‘ರಂಗ ವಿಮರ್ಶಾ ಕಮ್ಮಟ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪತ್ರಿಕೆಗಳು ಜ್ಞಾನದ ನಿಧಿ ಇದ್ದಂತೆ. ಅವು ಪ್ರಮುಖ ನಾಟಕಾರರನ್ನು ರೂಪಿಸಿವೆ. ಅದಕ್ಕೆ ಸ್ಪಷ್ಟ ಉದಾಹರಣೆಯೇ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ, ಇಡೀ ಪತ್ರಿಕೆಗಳಿಂದಲೇ ಅದ್ಭುತ ನಾಟಕ ಶೈಲಿಯನ್ನೇ ಅವರು ಕಟ್ಟಿದವರು ಎಂದು ಭೀಮಸೇನ ಅವರು ಸ್ಮರಿಸಿದರು. ಪತ್ರಿಕೆಗಳಂತೆಯೇ ವಾಸ್ತವ ಬದುಕಿನ ಪ್ರತಿರೂಪವನ್ನು ಬಿಂಬಿಸುವಂತೆ, ನೇರ, ದಿಟ್ಟವಾಗಿ ನಿರ್ಭೀಡೆಯಿಂದ ಜೀವನದ ಚಿತ್ರಣವನ್ನು ನಾಟಕಗಳಲ್ಲಿ ಹಿರಣ್ಣಯ್ಯನವರು ಕಟ್ಟಿಕೊಟ್ಟವರು ಎಂದು ಅಭಿಪ್ರಾಯಪಟ್ಟರು.
ರಂಗ ಕಲಾವಿದರು, ಪತ್ರಕರ್ತರು ಸೇರಿದಂತೆ ಇತರೆ ಗಣ್ಯರು ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಂಗಾಯಣ ಕಲಬುರಗಿ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಇವುಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ಡಿ.ಶಿವಲಿಂಗಪ್ಪ, ಹಣಮಂತರಾವ್ ಬೈರಾಮಡಗಿ, ದೇವೇಂದ್ರಪ್ಪ ಕಪನೂರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ.ಜಿ.ಬಿ., ರಂಗ ಸಮಾಜದ ಸದಸ್ಯರಾದ ಶ್ರೀಧರ್ ಹೆಗಡೆ, ಪ್ರಭುದೇವ್ ಕಪಗಲ್ ಮತ್ತು ನಾಟಕ ಅಕಾಡೆಮಿಯ ಸದಸ್ಯ ಪ್ರವೀಣ ರಾಠೋಡ ಇದ್ದರು.
ಮಧ್ಯಾಹ್ನದ ‘ರಂಗ ವಿಮರ್ಶಾ ಕಮ್ಮಟ’ ಕಾರ್ಯಕ್ರಮದ ಗೋಷ್ಠಿಯಲ್ಲಿ ‘ನಾಟಕ ಕೃತಿ ಕೇಂದ್ರಿತ ವಿಮರ್ಶೆ’ ವಿಷಯವಾಗಿ ಹಿರಿಯ ಪತ್ರಕರ್ತರಾದ ಡಾ. ಗಣೇಶ ಅಮೀನಗಡ, ಶೇಷಮೂರ್ತಿ ಅವಧಾನಿ, ಮಹಿಪಾಲರೆಡ್ಡಿ ಮುನ್ನೂರ್ ವಿಷಯ ಮಂಡಿಸಿದರೆ, ಗೋಷ್ಠಿಯ ಅಧ್ಯಕ್ಷತೆಯ ಭಾಷಣವನ್ನು ಹಿರಿಯ ನಾಟಕಕಾರರಾದ ಡಾ.ರಾಜಪ್ಪ ದಳವಾಯಿ ಅವರು ಮಾಡಿದರು.
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ರಂಗಾಯಣದ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಮಾಡಿದರೆ, ರಂಗಾಯಣದ ಕಲಾವಿದೆ ಅಕ್ಷತಾ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿದರು.