ನಾಟಕಗಳು ಸಮಾಜದ ನೈಜ ಪ್ರತಿಬಿಂಬ : ಡಾ.ವಂಟಿ

ಕಲಬುರಗಿ:ಮೇ.13: ರಂಗಭೂಮಿ ಅಥವಾ ನಾಟಕಗಳು ನೆಡದಾಡುವ ವಿಶ್ವವಿದ್ಯಾಲಯವಾಗಿದೆ. ವಾಸ್ತವ ಸ್ಥಿತಿಯನ್ನು ದೊಡ್ಡದು ಅಥವಾ ಚಿಕ್ಕದಾಗಿ ಹೇಳದೆ, ಇರುವುದನ್ನು, ಇರುವ ಹಾಗೆಯೇ ಹೇಳುವ ಮೂಲಕ ಸಮಾಜದ ನೈಜ ಪ್ರತಿಬಿಂಬವಾಗಿದೆ. ಆದ್ದರಿಂದ ರಂಗಭೂಮಿ ಕಲಾವಿದರಿಗೆ ಅವರಲ್ಲಿರುವ ಕಲೆಗೆ ಪ್ರೋತ್ಸಾಹ ನೀಡಿ ಬೆಳೆಸಿದರೆ ಮಾತ್ರ ರಂಗಭೂಮಿ ಕ್ಷೇತ್ರ, ಕಲೆಗಳು, ಕಲಾವಿದರು ಉಳಿಯಲು ಸಾಧ್ಯವಿದೆ ಎಂದು ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.
ನಗರದ ಅನ್ನಪೂರ್ಣ ಕ್ರಾಸ್‍ನಲ್ಲಿರುವ ಕಲಾ ಮಂಡಳದಲ್ಲಿ ಶುಕ್ರವಾರ ಸಂಜೆ ‘ಜನಮಿತ್ರ ಸಾಂಸ್ಕøತಿಕ ಸಂಘ’ದ ವತಿಯಿಂದ ಮಾತೆ ರಮಾಬಾಯಿ ಅಂಬೇಡ್ಕರ್ ಜೀವನಾಧಾರಿತ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮಾತೋಶ್ರೀ ರಮಾಬಾಯಿ ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ದೇಶ ಕಟ್ಟುವ ಕಾರ್ಯಕ್ಕೆ ಕೈಜೋಡಿಸುವ ಮೂಲಕ ದೇಶಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಹಿರಿಯ ಕ್ರೀಡಾ ತರಬೇತಿದಾರ ಶಿವಶರಣಪ್ಪ ಕಾಬಾ ಮಾತನಾಡಿ, ಇಂದಿನ ಆಧುನಿಕತೆಯ ಡಿಜಿಲೀಕರಣದ ಯುಗದಲ್ಲಿ ನಾಟಕ ನೋಡುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಇದರಿಂದ ಕಲಾವಿದರು ತಮ್ಮ ಜೀವನ ಸಾಗಿಸುವುದು ಕಷ್ಟವಾಗಿ, ಮತ್ತೊಂದು ವೃತ್ತಿಗೆ ತೆರಳಬೇಕಾದ ಅನಿವಾರ್ಯತೆ ಬಂದಿದೆ. ಸರ್ಕಾರ ಕಲಾವಿದರಿಗೆ ಸೂಕ್ತ ಮಾಸಾಶನ, ಆರ್ಥಿಕ ಭದ್ರತಾ ಸೌಲಭ್ಯಗಳನ್ನು ನೀಡಬೇಕು. ನಾಟಕ ಅಥವಾ ರಂಗಭೂಮಿಯು ಸಮಾಜದಲ್ಲಿರುವ ಅಂಕು-ಡೊಂಕುಗಳು, ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಪರಿಹಾರವನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತದೆ. ಆಧುನೀಕರಣದ ಇಂದಿನ ಯುಗದಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ನಾಟಕ, ರಂಗಭೂಮಿ ಸಂಸ್ಕøತಿ, ಮೌಲ್ಯಗಳ ರಕ್ಷಕನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಪ್ರೊ.ಈಶ್ವರ ಇಂಗನ್, ಶಿವಯೋಗಪ್ಪ ಬಿರಾದಾರ, ಎಸ್.ಬಿ.ಹರಿಕೃಷ್ಣ, ಧರ್ಮಣ್ಣ ಧನ್ನಿ, ಶಿವಶಂಕರ ಬಿ., ಮಲ್ಲಿಕಾರ್ಜುನ ದೊಡ್ಡಮನಿ, ಸಂತೋಷ ರಾಯಕೋಡೆ, ಜಯಶ್ರೀ ಎಸ್.ವಂಟಿ ಸೇರಿದಂತೆ ಇನ್ನಿತರರಿದ್ದರು.