ನಾಟಕಗಳು ಜೀವನದ ಮೌಲ್ಯಗಳನ್ನು ತಿಳಿಸಿಕೊಡುತ್ತವೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.01: ನಮ್ಮ ಹಿರಿಯರು ಪೌರಾಣಿಕ ನಾಟಕಗಳ ಮೂಲಕ ಜೀವನದ ಮೌಲ್ಯಗಳನ್ನು ತಮ್ಮ ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದರು ಜೊತೆಗೆ ಬದುಕಿನ ಸನ್ಮಾರ್ಗವನ್ನು ತೋರಿಸುತ್ತಿದ್ದರು ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ತಮ್ಮ ಸ್ವಗಾಮ ಹರಳಹಳ್ಳಿಯಲ್ಲಿ ಶ್ರೀ ಬಸವೇಶ್ವರ ಕೃಪಾಪೆÇೀಷಿತ ನಾಟಕ ಮಂಡಳಿಯವರು ಏರ್ಪಡಿಸಿದ್ದ ತ್ರಿಜನ್ಮಮೋಕ್ಷ ಅಥವಾ ಜಯ-ವಿಜಯರ ಶಾಪ ವಿಮೋಚನೆ ಎಂಬ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ನಾಡಿನ ಚಾರಿತ್ರಿಕ ಸಂಸ್ಕೃತಿಯನ್ನು ಅನಾವರಣಗೊಳಿಸುವಲ್ಲಿ ಪೌರಾಣಿಕ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲಾ ಪೌರಾಣಿಕ ನಾಟಕಗಳಲ್ಲಿಯೂ ಒಂದೊಂದು ರೀತಿಯ ಮೌಲ್ಯಗಳು ಅಡಕವಾಗಿರುತ್ತವೆ. ಪಾತ್ರಗಳಿಗೆ ಜೀವತುಂಬುವ ಕಲೆಗಾರಿಕೆಗಾಗಿ ಐದಾರು ತಿಂಗಳುಗಳ ಕಾಲ ಅಭ್ಯಾಸ ಮಾಡಲಾಗಿರುತ್ತದೆ. ಪೌರಾಣಿಕ ನಾಟಕಗಳಲ್ಲಿ ಬರುವ ಒಂದೊಂದು ಪಾತ್ರಗಳು ತನ್ನದೇ ಆದ ವಿಶೇಷತೆಗಳನ್ನು ಹೊಂದಿವೆ. ನಮ್ಮ ಗ್ರಾಮದಲ್ಲಿನ ಯುವಕ ಮಿತ್ರರು ಕಲೆಯ ಆರಾಧಕರಾಗಿ ನಾಟಕವನ್ನು ಪ್ರಸ್ತುತಿಪಡಿಸುತ್ತಿದ್ದಾರೆ. ಇಂದಿನ ಯುವಕಮಿತ್ರರು ನಾಟಕಗಳನ್ನು ಕಲಿಯುವುದರ ಜೊತೆಗೆ ಅವುಗಳಲ್ಲಿರುವ ನೀತಿ, ಮೌಲ್ಯ, ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಲಾ ಆರಾಧಕರನ್ನು ಪೆÇ್ರೀತ್ಸಾಹಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ತಾಲ್ಲೂಕಿನಲ್ಲಿ ಪ್ರತಿವರ್ಷ ನೂರಕ್ಕೂ ಹೆಚ್ಚು ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕ್ಷೇತ್ರದ ಅಭಿವೃದ್ದಿಗೆ ಕಾಳಜಿಯಿದೆ:-
ತಾಲ್ಲೂಕಿನ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಎಲ್ಲಾ ಹೋಬಳಿಗಳಲ್ಲಿಯೂ ಅಧಿಕ ಮತಗಳನ್ನು ನೀಡಿ ಜಯಗಳಿಸಿದ್ದಾರೆ. ನನಗೆ ಲಭ್ಯವಿರುವ ಅನುದಾನದ ಜೊತೆಗೆ ವಿಶೇಷ ಅನುದಾನಗಳನ್ನು ತಂದು ತಾಲ್ಲೂಕನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ನನ್ನ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ. ನೀವು ನೀಡಿದ ಮತಕ್ಕೆ ಗೌರವ ತರುವ ಕೆಲಸವನ್ನು ಮಾಡುತ್ತೇನೆ. ಜವಾಬ್ದಾರಿಯುತ ಶಾಸಕನಾಗಿ ತಾಲ್ಲೂಕಿನ ಜನತೆಯ ಕಷ್ಟಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ವಿರೋಧ ಪಕ್ಷದ ಸರ್ಕಾರವಿದ್ದರೂ ಒಬ್ಬ ಶಾಸಕನಿಗೆ ಲಭ್ಯವಾಗುವ ಅನುದಾನದಲ್ಲಿ ಹಂತಹಂತವಾಗಿ ಕ್ಷೇತ್ರದ ಅಭಿವೃದ್ದಿ ಕೆಲಸಗಳನ್ನು ಕೈಗೆತ್ತಿಕೊಂಡು ಮಾಡಲಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಹರಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಲಿಂಗೇಗೌಡ, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು, ಹರಳಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಟಿ.ಲೋಕೇಶ್, ಗ್ರಾಪಂ ಸದಸ್ಯರಾದ ನಂದಿನಿನಾಗಶೆಟ್ಟಿ, ಆರ್.ಕೆ.ಯೋಗೇಶ್, ಉಮಾಶ್ರೀಧರ್, ಗ್ರಾಪಂ ಮಾಜಿ ಅಧ್ಯಕ್ಷರಾದ ಪಾಪೇಗೌಡ, ಭೈರಾಪುರಹರೀಶ್, ಮುಖಂಡ ಸುಬ್ಬೇಗೌಡ ಸೇರಿದಂತೆ ಹಲವರಿದ್ದರು.