ನಾಗ ಪಂಚಮಿ ನಿಮಿತ್ಯ ಬಡ ಹೆಣ್ಣುಮಕ್ಕಳಿಗೆ ಬಟ್ಟೆ ವಿತರಣೆ

ಬೀದರಃ ಆ.2:ನಗರದ ಅಂಬೇಡ್ಕರ ವೃತ್ತದ ಹತ್ತಿರದಲ್ಲಿರುವ ಕರ್ನಾಟಕ ಸಾಹಿತ್ಯ ಸಂಘದ ಆವರಣದಲ್ಲಿ ಸೋಮವಾರ ನಾಗಚೌತಿಯಂದು ಗುಮ್ಮೆ ಕಾಲೋನಿಯ ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಬಡ ಹೆಣ್ಣು ಮಕ್ಕಳು ಹಾಗೂ ಯುವತಿಯರಿಗೆ ಪಂಚಮಿ ಹಬ್ಬದ ಪ್ರಯುಕ್ತ ಉಚಿತ ಸೀರೆ ಹಾಗೂ ಬಟ್ಟೆ ವಿತರಣೆ ಕಾರ್ಯಕ್ರಮ ಜರುಗಿತು.

ಸಮಾರಂಭ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆಯವರು ಮಾತನಾಡಿ ಹಬ್ಬ ಹರಿದಿನಗಳಂದು ಹೆಣ್ಣು ಮಕ್ಕಳಿಗೆ ಏನೆನೋ ಆಶೆ-ಆಕಾಂಕ್ಷೆಗಳಿರುತ್ತವೆ. ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಬಟ್ಟೆ ನಮ್ಮ ಮಾನ ಮರ್ಯಾದೆ ಕಾಪಾಡುತ್ತದೆ. ಪ್ರತಿ ಹಬ್ಬಕ್ಕೆ ಖರೀದಿಸುವ ಸಾಮಾನ್ಯ ವಸ್ತು ಬಟ್ಟೆ. ಅಂತಹದರಲ್ಲಿ ನಾಗಪಂಚಮಿ ನಾಡಿಗೆ ದೊಡ್ಡ ಹಬ್ಬ. ಈ ದಿಶೆಯಲ್ಲಿ ಬಡ ಹೆಣ್ಣುಮಕ್ಕಳು ಹಾಗೂ ಯುವತಿಯರಿಗೆ ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಸಂಗಮೇಶ ಬಿರಾದಾರ ಅವರು ತಂದೆಯ ಅಥವಾ ಅಣ್ಣನ ಸ್ಥಾನದಲ್ಲಿ ನಿಂತು ಬಟ್ಟೆ ವಿತರಿಸಿರುವುದು ಇಡೀ ಮನುಕುಲಕ್ಕೆ ಮಾದರಿ ಎಂದು ಪ್ರಶಂಸಿದರು.

ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ಮುಖ್ಯ ಅತಿಥಿಗಳಾಗಿ ಮಾತನಾಡಿ ಹಬ್ಬ ಹರಿದಿನಗಳಂದು ನಮ್ಮ ವೈಶಿಷ್ಟ್ಯತೆ, ವೈಚಾರಿಕತೆ ಹಾಗೂ ಸಂಸ್ಕøತಿ ಅಭಿವೃದ್ಧಿಗೊಳ್ಳುತ್ತದೆ. ವಿಶೇಷವಾಗಿ ಉತ್ಸವಗಳು ನಮ್ಮ ಉತ್ಸಾಹ ಹೆಚ್ಚಿಸುತ್ತದೆ. ಮನುಷ್ಯನ ದುಃಖ ದೂರ ಮಾಡಲು ಹಬ್ಬಗಳು ಕಾರಣಗಳಾಗುತ್ತವೆ. ಅದರಲ್ಲೂ ನಾಗಪಂಚಮಿ ದಿನದಂದು ಪ್ರತಿ ಮನೆಯಲ್ಲಿ ಕಲೆ, ಸಾಹಿತ್ಯ ಹಾಗೂ ಸಂಸ್ಕøತಿ ಇಮ್ಮಡಿಗೊಳ್ಳುತ್ತದೆ. ವಿಶೇಷವಾಗಿ ಇದು ಶ್ರಾವಣ ಮಾಸ ಇರುವುದರಿಂದ ಮಹಿಳೆಯರ ಕನಸುಗಳು ಇದರಿಂದ ಸಾಕಾರಗೊಳ್ಳುತ್ತದೆ. ಸಂಗಮೇಶ ಬಿರಾದಾರ ಇಂತಹ ಅನೇಕ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ನಾಗರಿಕತ್ವವನ್ನ ನಾಡಿನುದ್ದಕ್ಕೂ ಪಸರಿಸಲು ಕಾರಣರಾಗಿರುವರು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ ಕೊವಿಡ್ ಸಂದರ್ಭದಲ್ಲಿ ಅದೆಷ್ಟೊ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ, ಹಸಿದ ಗೋವುಗಳಿಗೆ ಮೇವು ವಿತರಣೆ, ದುರ್ಬಲ ಹಾಗೂ ಬಡ ಕಾರ್ಮಿಕರ ಆರ್ಥಿಕ ಅಭಿವೃದ್ಧಿಗೆ ಉದಾರ ಧನ ದಾನ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಸಂಗಮೇಶ ಬಿರಾದಾರ ಅವರು ಇತ್ತೀಚಿಗೆ ಹದಿನಾರು ಹಸುಗಳ ಸಂರಕ್ಷಣೆ ಹಾಗೂ ಸಂರ್ವಧನೆಗೆ ಪಣತೊಟ್ಟು ಸುಮಾರು ಮುವತ್ತಕ್ಕೂ ಹೆಚ್ಚು ಗೋವುಗಳಿಗೆ ಆಶ್ರಯ ನೀಡಿರುವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಾ ಅಧ್ಯಕ್ಷ ಎಸ್.ಬಿ. ಕುಚಬಾಳ ಮಾತನಾಡಿದರು. ಕ.ಜಾ.ಪ. ಚಿಟಗುಪ್ಪಾ ತಾಲೂಕು ಗೌರವ ಅಧ್ಯಕ್ಷ ಮಹಾರುದ್ರಪ್ಪ ಆಣದೂರೆ, ರಾಜ್ಯ ಪ್ರಶಸ್ತಿ ಪುರಸ್ಕøತೆ ಮಂಗಲಾ ಮರಖಲೆ, ಕರ್ನಾಟಕ ಸಾಹಿತ್ಯ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಅಖಿಲ ಭಾರತೀಯ ವೀರಶೈವ ಮಹಾಸಭೆಯ ಬೆಂಗಳೂರು ನಗರ ಯುವ ಘಟಕದ ಉಪಾಧ್ಯಕ್ಷ ಕಾರ್ತಿಕ ಸ್ವಾಮಿ ಮಠಪತಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಸುಮಾರು ಹತ್ತು ಜನ ಮಹಿಳೆಯರಿಗೆ ಉಚಿತ ಸೀರೆ ಉಡುಗೊರೆ ಹಾಗೂ 22 ಜನ ಯುವತಿಯರು ಮತ್ತು ಮಕ್ಕಳಿಗೆ ಬಟ್ಟೆ (ಡ್ರೆಸ್) ವಿತರಿಸಲಾಯಿತು. ಆರಂಭದಲ್ಲಿ ಶ್ರೀ ವೈಷ್ಣೋದೇವಿ ಟ್ರಸ್ಟ್‍ನ ಅಧ್ಯಕ್ಷರಾದ ಸಂಗಮೇಶ ಬಿರಾದಾರ ಸ್ವಾಗತಿಸಿದರು. ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಕಾರ್ಯಕ್ರಮ ನಿರೂಪಿಸಿದರು. ದತ್ತು ವಿ. ಬಾವಗೆ ವಂದಿಸಿದರು. ಗಣಪತಿ ಕೋಡಗೆ, ದತ್ತು ಬಿ. ಯರನಳ್ಳಿ, ಬಸವರಾಜ ಕೋಡಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.