ನಾಗೋರಾ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಗರಿ

ಬೀದರ್: ಮಾ.29:ತಾಲ್ಲೂಕಿನ ನಾಗೋರಾ ಗ್ರಾಮ ಪಂಚಾಯಿತಿಯು 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರದ ಗರಿ ಮುಡಿಗೇರಿಸಿಕೊಂಡಿದೆ.

ಪಾರದರ್ಶಕ ಆಡಳಿತ, ಸರ್ಕಾರದ ಯೋಜನೆಗಳು ಹಾಗೂ ವಿನೂತನ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪಂಚಾಯಿತಿಗೆ ಪ್ರಶಸ್ತಿ ಸಂದಿದೆ.

ಗಾಂಧಿ ಗ್ರಾಮ ಪುರಸ್ಕಾರವು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ಹಾಗೂ ಸಿಬ್ಬಂದಿಗೆ ಇನ್ನಷ್ಟು ಉತ್ಸಾಹದಿಂದ ಜನಪರ ಕಾರ್ಯ ಕೈಗೊಳ್ಳಲು ಪ್ರೇರಣೆ ನೀಡಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿದೇವಿ ಹೊಸಮನಿ ತಿಳಿಸಿದ್ದಾರೆ.

ನಾಗೋರಾ ಗ್ರಾಮ ಪಂಚಾಯಿತಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಅನೇಕ ವಿನೂತನ ಜನಪರ ಕಾರ್ಯಗಳ ಮೂಲಕ ಗಮನ ಸೆಳೆದಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲೇ ಮೊದಲ ಸ್ವಚ್ಛ ಸಂಕೀರ್ಣ ಘಟಕ ನಿರ್ಮಿಸಲಾಗಿದೆ. ತಾಲ್ಲೂಕಿನಲ್ಲೇ ಪ್ರಥಮ ಬಾರಿಗೆ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗಿದೆ. ಶಾಲೆಗಳಲ್ಲಿ ಪೌಷ್ಟಿಕ ಕೈತೋಟ, ಉದ್ಯಾನ ನಿರ್ಮಾಣ ಮಾಡಲಾಗಿದೆ. ಸೋಲಾರ್ ಬೀದಿ ದೀಪ, ಸಾರ್ವಜನಿಕರ ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ಮಶಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸರ್ಕಾರದ ಜಾಗ ಒತ್ತುವರಿ ತೆರವುಗೊಳಿಸಲಾಗಿದೆ. ಸರ್ಕಾರಿ ಹಳೆಯ ಕಟ್ಟಡಗಳ ಜೀಣೋದ್ಧಾರ ಮಾಡಲಾಗಿದೆ. ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿಇಒ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಇತರ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಮಾರ್ಗದರ್ಶನ ಹಾಗೂ ಸಹಕಾರದಿಂದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ: ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಪಾಟೀಲ, ಉಪಾಧ್ಯಕ್ಷ ಶಿವಕುಮಾರ, ಪಿಡಿಒ ಗಾಯತ್ರಿದೇವಿ ಹೊಸಮನಿ ಹಾಗೂ ಸದಸ್ಯರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ರೂ. 5 ಲಕ್ಷ ಪ್ರೋತ್ಸಾಹ ಧನದ ಚೆಕ್ ನೀಡಿ ಗೌರವಿಸಿದರು.