ನಾಗೇಶ್‌ಗೆ ’ಬ್ಯಾಡ್‌ಲಕ್’

ಬೆಂಗಳೂರು, ಜ. ೧೨- ನಾಳೆ ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ಯಾರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಯಾರಿಗೆ ಅದೃಷ್ಟ ಖುಲಾಯಿಸಲಿದೆ ಎಂಬುದು ಇನ್ನೂ ಸ್ಪಷ್ಟವಾಗದಿದ್ದರೂ ಅಬಕಾರಿ ಸಚಿವ ಹೆಚ್. ನಾಗೇಶ್ ಅವರ ಸಚಿವ ಸ್ಥಾನಕ್ಕೆ ಸಂಚಾಕಾರ ಬರಲಿದೆ ಎಂದು ಹೇಳಲಾಗುತ್ತಿದೆ.
ನಾಳೆ ನಡೆಯಲಿರುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಬಕಾರಿ ಸಚಿವ ನಾಗೇಶ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವುದು ಖಚಿತ ಎಂದು ಹೇಳಲಾಗುತ್ತಿದೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಶ್ ಅವರ ವಿರುದ್ಧ ಕೇಂದ್ರ ನಾಯಕರವರೆಗೂ ದೂರುಗಳು ಹೋಗಿದ್ದು, ಇತ್ತೀಚೆಗೆ ಇಲಾಖೆಗೆ ಸಂಬಂಧಿಸಿದಂತೆ ಲಂಚ ಕೇಳಿದ ಮಾಹಿತಿಗಳನ್ನು ಸಾಕ್ಷ್ಯ ಸಮೇತ ಪಕ್ಷದ ಕೆಲ ನಾಯಕರು ವರಿಷ್ಠರಿಗೆ ಮುಟ್ಟಿಸಿದ್ದರು ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಳ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರೇ ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದ್ದು, ಬಹುತೇಕ ಸಚಿವ ನಾಗೇಶ್ ಅವರ ಪಟ್ಟಕ್ಕೆ ಕುತ್ತು ಬರಲಿದೆ ಎಂದು ಪಕ್ಷದ ಮೂಲಗಳ ಹೇಳಿವೆ.
ಸಿಎಂ ಭೇಟಿಯಾದ ನಾಗೇಶ್
ಸಚಿವ ಸಂಪುಟದಿಂದ ತಮ್ಮನ್ನು ಕೈಬಿಡಲಾಗುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಚಿವ ನಾಗೇಶ್ ಇಂದು ಬೆಳಿಗ್ಗೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಂಪುಟದಿಂದ ಕೈಬಿಡದಂತೆ ಮನವಿ ಮಾಡಿದರು.
ಮುಖ್ಯಮಂತ್ರಿಗಳ ಭೇಟಿ ನಂತರ ಸ್ವಲ್ಪ ಸಿಟ್ಟಾದಂತೆ ಕಂಡುಬಂದ ನಾಗೇಶ್ ಅವರು ಯಾರ ಜತೆಯೂ ಮಾತನಾಡದೇ ಸಿಟ್ಟಿನಿಂದಲೇ ತೆರಳಿದರು ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನಾಗೇಶ್ ರವರು ಸಚಿವ ಪಟ್ಟ ಕಳೆದುಕೊಳ್ಳುವ ಸಾಧ್ಯತೆ ಇದೆ.