ನಾಗೇಂದ್ರ ರಾಜೀನಾಮೆಗೆ ಸೂಚಿಸಿಲ್ಲ

ಬೆಂಗಳೂರು, ಜೂ. ೬- ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ತಾವು ಸೂಚಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ೪೨ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ನಾಗೇಂದ್ರ ಅವರನ್ನು ಕರೆಸಿ ನಾನು ಮಾತನಾಡಿದ್ದೇನೆ. ಪೊಲೀಸ್ ತನಿಖೆ ನಡೆಯುತ್ತಿದೆ. ನಾಗೇಂದ್ರ ಅವರ ಜತೆ ಮಾತನಾಡಿದ ತಕ್ಷಣ ಅವರಿಗೆ ರಾಜೀನಾಮೆ ಕೊಡು ಎಂದು ಹೇಳಿದ್ದೇನೆ ಎಂದು ಅರ್ಥವೆ ಎಂದು ಪ್ರಶ್ನಿಸಿದರು. ಸಚಿವ ನಾಗೇಂದ್ರ ರಾಜೀನಾಮೆಗೆ ಸೂಚನೆ ನೀಡಿದ್ದೀರಾ ಎಂಬ ಪ್ರಶ್ನೆಗೆ ಇಲ್ಲ ಎಂದಷ್ಟೇ ಹೇಳಿದರು.
ಅರಸು ಗುಣಗಾನ
ಇದಕ್ಕೂ ಮೊದಲು ದಿ. ದೇವರಾಜ ಅರಸು ಅವರ ಕೊಡುಗೆಗಳನ್ನು ಸ್ಮ ರಿಸಿ ಅವರ ಗುಣಗಾನ ಮಾಡಿದರು. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿ ಅವರು ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿದ್ದರು. ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರೆ ಯಾವುದೇ ಪಕ್ಷಕ್ಕೂ ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ, ಕಳಕಳಿ, ಬದ್ಧತೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಸಚಿವ ಶಿವರಾಜ್ ತಗಂಡಗಿ, ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಮತ್ತಿತರರು ಇದ್ದರು.