ನಾಗೇಂದ್ರಗೆ ಕ್ರೀಡೆ, ಯುವಜನ ಸೇವೆ ಪರಿಶಿಷ್ಠ ವರ್ಗಗಳ ಕಲ್ಯಾಣ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನೇ.29: ಗ್ರಾಮೀಣ ಶಾಸಕ ನೂತನ ಸಚಿವ ಬಿ.ನಾಗೇಂದ್ರ ಅವರಿಗೆ ಕ್ರೀಡೆ, ಯುವಜನ ಸೇವೆ ಮತ್ತು ಈ ಹಿಂದಿನ ಸರ್ಕಾರದಲ್ಲಿ ಶ್ರೀರಾಮುಲು ಹೊಂದಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ.
ಈ ಬಗ್ಗೆ ನಿನ್ನೆ ರಾತ್ರಿ ಅಧಿಕೃತವಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಹರಿದಾಡಿದ ನಕಲಿ ಪಟ್ಟಿಯಲ್ಲಿ ನಾಗೇಂದ್ರ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಲಾಗಿದೆಂಬುದಾಗಿ ಇತ್ತು.
ಈಗ ನಾಗೇಂದ್ರ ಅವರಿಗೆ ದೊರೆತಿರುವ ಖಾತೆಗಳು ಈ ಹಿಂದೆ ಜನಾರ್ಧನರೆಡ್ಡಿ ಅವರು, ಹೊಂದಿದ್ದ ಯುವಜನ ಸೇವೆ ಮತ್ತು ಕ್ರೀಡೆ ಇಲಾಖೆ, ಶ್ರೀರಾಮುಲು ಹೊಂದಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಾಗಿದೆ.
ಜನಾರ್ಧನರೆಡ್ಡಿ ಅವರು ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಎಲ್ಲೂ ಇರದಂತ ಹೊನಲು ಬೆಳಕಿನ ಪುಟ್ ಬಾಲ್ ಮೈದಾನವನ್ನು ನಗರದಲ್ಲಿ ನಿರ್ಮಾಣ ಮಾಡಿದ್ದರು. ಬಿ.ಡಿ.ಎ.ಎ ಕ್ರೀಡಾ ಸಭಾಂಗಣ, ಈಜುಕೊಳ, ಫುಟ್ ಬಾಲ್, ಬ್ಯಾಡ್ ಮಿಂಟನ್ ಕೋರ್ಟ್ ನಿರ್ಮಾಣಕ್ಕೆ ಕಾರಣರಾಗಿದ್ದರು.
ಈಗ ನಾಗೇಂದ್ರ ಅವರು ತಮಗೆ ದೊರೆತ ಕ್ರೀಡಾ ಇಲಾಖೆಯ ಅವಕಾಶದಿಂದ ನಗರದಲ್ಲಿ ತಮ್ಮ ಹೆಸರು ಉಳಿಯುವಂತೆ ಯಾವ ಕೆಲಸ ಮಾಡುತ್ತಾರೆಂಬ ಪ್ರಶ್ನೆ ಇದೆ.
ಅಲ್ಲದೆ ಕಳೆದ 10ವರ್ಷಗಳ ಹಿಂದೆ ನಿರ್ಮಿಸಿದ್ದ ಬಿ.ಡಿ.ಎ.ಎ ಕ್ರೀಡಾಂಗಣದಲ್ಲಿ ಹಾಳಾಗಿರುವ ಆಸನಗಳ ವ್ಯವಸ್ಥೆಯನ್ನು ಸರಿಪಡಿಸುವ ಜವಾಬ್ದಾರಿ ಇದೆ. ಅಲ್ಲದೆ ನಗರದಲ್ಲಿ ಕೆಸಿಸಿಎ ನಿಂದ ಕ್ರಿಕೆಟ್ ಸ್ಟೇಡಿಯಂ ಆಗಬೇಕಿದೆ. ಈ ಹಿಂದೆ ಶ್ರೀರಾಮುಲು ಮತ್ತು ಸೋಮಶೇಖರರೆಡ್ಡಿ ಅವರು ಈ ನಿಟ್ಟಿನಲ್ಲಿ ಒಂದಿಷ್ಟು ಕೆಲಸ ಕಾರ್ಯ ಮಾಡಿದ್ದು ಅದನ್ನು ಪೂರ್ಣಗೊಳಿಸಬೇಕಾಗಿದೆ.
 ಕೊಠಡಿ ನಿಗಧಿ
ಸಚಿವ ನಾಗೇಂದ್ರ ಅವರಿಗೆ ವಿಧಾನಸೌಧದ ಮೂರನೇ ಮಹಡಿಯ 343 ಮತ್ತು 343 ಎ ಕೊಠಡಿಯನ್ನು ನಿಗಧಿ ಮಾಡಲಾಗಿದೆ. ಇಲ್ಲಿ ತಮ್ಮ ಸಚಿವಾಲಯದ ಕಛೇರಿಯನ್ನು ನಡೆಸಲಿದ್ದಾರೆ.
ನಾಡಿದ್ದು ನಗರಕ್ಕೆ
ಸಚಿವ ಸ್ಥಾನವಹಿಸಿಕೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ನಾಗೇಂದ್ರ ಅವರು ನಾಡಿದ್ದು ಮೇ.31ರಂದು ಆಗಮಿಸಲಿದ್ದಾರೆಂದು ಆಪ್ತ ಮೂಲಗಳು ತಿಳಿಸಿವೆ.