ನಾಗಾಲ್ಯಾಂಡ್ : ಅಮಾಯಕರ ಹತ್ಯೆ ಪ್ರತಿಧ್ವನಿ, ೧೨ ತಾಸು ಬಂದ್, ಸೇನೆಯ ವಿರುದ್ಧ ಎಫ್‌ಐಆರ್

ಕೊಹಿಮಾ,ಡಿ.೬- ಉಗ್ರರೆಂದು ಭಾವಿಸಿ ೧೪ ಮಂದಿ ಅಮಾಯಕರನ್ನು ಗುಂಡಿಕ್ಕಿ ಸೇನಾಪಡೆ ಹತ್ಯೆ ಮಾಡಿರುವ ಘಟನೆ ಬಗ್ಗೆನಾಗಾಲ್ಯಾಂಡ್‌ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಹಿನ್ನೆಲೆಂiiಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಮೊಬೈಲ್ ಹಾಗೂ ಇಂಟರ್‌ನೆಟ್ ಸೇವೆಯನ
ನಿಷೇಧಿಸಲಾಗಿದೆ.
ಇದೇ ವೇಳೆ ಭದ್ರತಾ ಪಡೆಗಳು ಅಮಾಯಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ ಜಿಲ್ಲಾ ಪೊಲೀಸರು ಅರೆಸೇನಾ ಪಡೆಗಳ ವಿರುದ್ಧ ಸ್ವಯಂ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಕಾರ್ಯಾಚರಣೆ ವೇಳೆ ಸೇನಾಪಡೆ ಪೊಲೀಸರ ಸಲಹೆ ಪಡೆಯದೆ ಅಮಾಯಕರನ್ನು ಹತ್ಯೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಯನ್ನು ಖಂಡಿಸಿ ಹಾಗೂ ಸೇನೆ ಭದ್ರತಾ ಪಡೆಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ೧೨ ತಾಸುಗಳ ಕಾಲ ಬಂದ್‌ಗೆ ಕರೆ ನೀಡಿವೆ.
ನಾಗಾಲ್ಯಾಂಡ್‌ಗೆ ಹೊಂದಿಕೊಂಡಿರುವ ಮಣಿಪುರ, ಅಸ್ಸಾಂ ಮತ್ತು ಅರುಣಾಚಲ ರಾಜ್ಯಗಳಲ್ಲೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.
ನಾಗಾಲ್ಯಾಂಡ್ ಮಾನ್ ಪ್ರದೇಶದಲ್ಲಿ ಅಂಗಡಿ-ಮುಂಗಟ್ಟುಗಳು, ಕಚೇರಿಗಳು ಇನ್ನಿತರ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಮುನ್ನೆಚ್ಚೆರಿಕೆ ಕ್ರಮವಾಗಿ ಮಾನ್ ಜಿಲ್ಲಾಡಳಿತ, ಕರ್ಫ್ಯೂ, ಮೊಬೈಲ್,ಇಂಟರ್‌ನೆಟ್ ಸೇವೆಯನ್ನು ನಿಷೇಧಿಸಲಾಗಿದೆ.
ಘಟನೆ ಖಂಡಿಸಿ ನಿನ್ನೆ ನಡೆದ ಹಿಂಸಾಚಾರದಲ್ಲಿ ಉದ್ರಿಕ್ತ ಗುಂಪನ್ನು ಚದುರಿಸಲು ಅಸ್ಸಾಂ ರೈಫಲ್ ಪಡೆ ಗುಂಡು ಹಾರಿಸಿದಾಗ ಓರ್ವ ಪ್ರತಿಭಟನಾನಿರತ ವ್ಯಕ್ತಿ ಮೃತಪಟ್ಟಿದ್ದರು. ಇದರಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.
ಸೇನಾಪಡೆಯ ಗುಂಡಿಗೆ ಬಲಿಯಾದ ೧೪ ಮಂದಿ ನಾಗರಿಕರ ಅಂತ್ಯಕ್ರಿಯೆ ನಡೆಸಲಾಯಿತು. ಮುಖ್ಯಮಂತ್ರಿ ನೈಫಿಯು ರಿಯೊ ಮತ್ತು ಉಪಮುಖ್ಯಮಂತ್ರಿ ವೈ. ಪಾಟನ್ ಭಾಗವಹಿಸಿದ್ದರು.
೫ ಲಕ್ಷ ರೂ. ಪರಿಹಾರ
ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ರಾಜ್ಯಸರ್ಕಾರ ತಲಾ ೫ ಲಕ್ಷ ರೂ. ಪರಿಹಾರ ಪ್ರಕಟಿಸಿದೆ. ಇದೇ ವೇಳೆ ನೆಫಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ಕುರಿತು ಐಜಿಪಿ ನೇತೃತ್ವದ ಉನ್ನತ ಮಟ್ಟದ ವಿಶೇಷ ತನಿಖಾ ತಂಡ ರಚಿಸುವುದಾಗಿಯೂ ನಾಗಾಲ್ಯಾಂಡ್‌ನ ಮುಖ್ಯಕಾರ್ಯದರ್ಶಿ ಜೆ. ಅಲಂ ತಿಳಿಸಿದ್ದಾರೆ.
ಸೇನೆಗೆ ನೀಡಿರುವ ವಿಶೇಷಾಧಿಕಾರವನ್ನು ತಕ್ಷಣವೇ ರದ್ದುಪಡಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಒತ್ತಡ ಕೇಳಿ ಬರುತ್ತಿದ. ನಾಗಾಲ್ಯಾಂಡ್ ಆಶ್‌ಟ್ಯಾಗ್‌ನಲ್ಲಿ ಈಶಾನ್ಯ ಭಾರತದ ಜನರು ಒಕ್ಕೊರಲಿನಿಂದ ಈ ಆಗ್ರಹ ಮಾಡಿದ್ದಾರೆ.
ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ೧೪ ಮಂದಿ ಅಮಾಯಕರು ಮೃತಪಟ್ಟ ನಂತರ ಸೇನೆಗೆ ನೀಡಿರುವ
ವಿಶೇಷಾಧಿಕಾರವನ್ನು ರದ್ದು ಮಾಡಬೇಕೆಂಬ ಕೂಗು ಹೆಚ್ಚಾಗಿದೆ.