ನಾಗವಲ್ಲಿ ಕೆರೆಗೆ ಸಂಸ್ಕರಣಾ ನೀರು: ಗೌರಿಶಂಕರ್

ತುಮಕೂರು, ನ. ೧೫- ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿನ ಕೆರೆಗಳನ್ನು ಏತ ನೀರಾವರಿ ಯೋಜನೆಯಿಂದ ತುಂಬಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾಗವಲ್ಲಿ ಕೆರೆಗೆ ಬೆಂಗಳೂರಿನ ಸಂಸ್ಕರಿಸಿದ ನೀರನ್ನು ಬೆಳೆ ಮತ್ತು ಕೊಳವೆ ಬಾವಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಹರಿಸಲು ಯೋಜನೆ ರೂಪಿಸಲಾಗುವುದು ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.
ತಾಲ್ಲೂಕಿನ ಹೆಬ್ಬೂರು ಹೋಬಳಿ ವ್ಯಾಪ್ತಿಯ ಯಲದಹಳ್ಳಿ, ದಾಸರಹಳ್ಳಿ, ಮಾಯಮ್ಮನ ಪಾಳ್ಯ, ಚೋಳಾಪುರ ಗ್ರಾಮಗಳಲ್ಲಿ ೫೦ ಲಕ್ಷ ವೆಚ್ಚದ ಸಿ.ಸಿ. ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳಿಗೆ ಚಾಲನೆ ಹಾಗೂ ಮಹಿಳೆಯರಿಗೆ ಬಾಗಿನ ವಿತರಿಸಿ ಅವರು ಮಾತನಾಡಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ಚಾಲನೆಯಲ್ಲಿರುವ ಏತ ನೀರಾವರಿಗೆ ಹೇಮಾವತಿಯಿಂದ ಕೇವಲ ೩೦೦ ಎಂಸಿಎಫ್‌ಟಿ ನೀರು ಹಂಚಿಕೆಯಾಗಿದ್ದು, ಈ ಯೋಜನೆಯಿಂದ ಗ್ರಾಮಾಂತರದ ನೀರಾವರಿ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ, ಜನರಲ್ಲಿ ಗೊಂದಲವನ್ನುಂಟು ಮಾಡಲು ಬೇರೆ ಪಕ್ಷದವರು, ಆ ಕೆರೆ ತುಂಬಿಲ್ಲ, ಈ ಕೆರೆ ತುಂಬಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ನೀರನ್ನು ಹರಿಸುವ ಬಗ್ಗೆ ಚಿಂತಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿಯಾದರೆ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚುವುದಲ್ಲದೆ, ರೈತರು ಬೆಳೆ ಬೆಳೆಯಲು ಅನುಕೂಲವಾಗಲಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಶ್ರಮಿಸುವುದಾಗಿ ಆಶ್ವಾಸನೆ ನೀಡಿದರು.
ಮಾದರಿ ಗ್ರಾಮ
ಹೆಬ್ಬೂರು ಹೋಬಳಿಯಲ್ಲಿ ಸೇರಿದಂತೆ ಗ್ರಾಮಾಂತರ ಕ್ಷೇತ್ರದಲ್ಲಿ ಮುಂದಿನ ಡಿಸೆಂಬರ್ ವೇಳೆ ಮಾದರಿ ಗ್ರಾಮಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದ್ದು, ಸಿ.ಸಿ.ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಕ್ರಮವಹಿಸಲಾಗಿದೆ ಎಂದ ಅವರು, ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ತಮ್ಮ ಗ್ರಾಮಗಳಲ್ಲಿರುವ ಸಮಸ್ಯೆಗಳ ಬಗ್ಗೆ ಪಟ್ಟಿಯನ್ನು ತಯಾರಿಸಿ ನೀಡುವಂತೆ ಸೂಚಿಸಿದರು.
ರಾಜಕಾರಣ ಬೇಡ: ಚುನಾವಣಾ ಸಂದರ್ಭದಲ್ಲಿ ಮಾತ್ರ ಪಕ್ಷ, ರಾಜಕಾರಣ ಮಾಡೋಣ ಉಳಿದ ಸಮಯದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸೋಣ ಎಂದ ಅವರು, ಗ್ರಾಮಾಂತರ ಕ್ಷೇತ್ರವನ್ನು ಮುಂದಿನ ೨.೫ ವರ್ಷದಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನುದಾನವನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಡುಗಡೆಗೊಳಿಸಿದ್ದು, ಅಭಿವೃದ್ಧಿ ಕಾರ್ಯಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದರು.
ಗ್ರಾಮಾಂತರ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ವೃದ್ಧರಿಗೆ ಪಿಂಚಣಿ ಬಂದಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿದ್ದು, ತಂತ್ರಾಂಶ ಬದಲಾವಣೆಯಿಂದ ತಾಂತ್ರಿಕ ಸಮಸ್ಯೆಯುಂಟಾಗುತ್ತಿದೆ. ಒಂದು ವಾರದೊಳಗೆ ಅಧಿಕಾರಿಗಳನ್ನು ಕರೆಸಿ, ಪಿಂಚಣಿ ಸ್ಥಗಿತಗೊಂಡಿರುವ ಎಲ್ಲರಿಗೂ ಪಿಂಚಣಿ ಹಣವನ್ನು ದೊರೆಯುವಂತೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ವೆಂಕಟೇಶ್‌ಗೌಡ, ಕೆ.ವಿ.ರಾಜು, ಕೋಡಿ ಮುದ್ದನಹಳ್ಳಿ ಪ್ರಕಾಶ್, ಅಬ್ಬಾಸ್, ಯಲದಹಳ್ಳಿ ಗ್ರಾಮದ ಜನರು ಹಾಗೂ ಹೆಬ್ಬೂರು ಮತ್ತು ಬಳ್ಳಗೆರೆ ಗ್ರಾಮ ಪಂಚಾಯ್ತಿಯ ಮಾಜಿ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.