
ಕೆಜಿಎಫ್, ಆ,೩-ಪೊಲೀಸ್ ಇಲಾಖೆಯಿಂದ ನಾಗರೀಕರಿಗೆ ನೀಡುವಂತಹ ನಾಗರೀಕ ಬಂದೂಕು ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಕರೆ ನೀಡಿದರು.
ನಗರದ ಡಿ.ಎ.ಆರ್. ಕೇಂದ್ರ ಸ್ಥಾನದಲ್ಲಿ ಹತ್ತು ದಿನಗಳ ಕಾಲ ಆಯೋಜಿಸಿದ್ದ ನಾಗರೀಕ ಬಂದೂಕು ತರಬೇತಿಯ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಸಾರ್ವಜನಿಕರ ಪ್ರಾಣ ಹಾನಿಯಾಗದಂತೆ, ಸ್ವತಃ ರಕ್ಷಿಸಿಕೊಳ್ಳಲು ಅನುಕೂಲವಾಗುವಂತೆ ಈ ತರಬೇತಿಯನ್ನು ಆಯೋಜಿಸಲಾಗಿದೆ. ಬಂದೂಕು ಪರವಾನಗಿ ಪಡೆಯುವ ಸಹಾಯಾರ್ಥವಾಗಿ ಹತ್ತು ದಿನಗಳ ಕಾಲ ಸಾರ್ವಜನಿಕರಿಗೆ ತರಬೇತಿಯನ್ನು ಹಮ್ಮಿಕೊಂಡಿದ್ದು, ನಾಗರೀಕರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು,
ಡಿ.ಎ.ಆರ್. ಪೊಲೀಸ್ ಇನ್ಸಪೆಕ್ಟರ್ ವಿ.ಸೋಮಶೇಖರ ಅವರ ಉಸ್ತುವಾರಿಯಲ್ಲಿ ಡಿ.ಎ.ಆರ್. ಅಧಿಕಾರಿ, ಸಿಬ್ಬಂದಿಗಳು ೬೫ ಮಂದಿ ನಾಗರೀಕರಿಗೆ ನಾಗರೀಕ ಬಂದೂಕು ತರಬೇತಿಯನ್ನು ವಿವಿಧ ಹಂತಗಳಲ್ಲಿ ನೀಡಲಾಯಿತು. ಪ್ರತಿನಿತ್ಯ ಬೆಳಿಗ್ಗೆ ಎರಡು ಗಂಟೆಗಳ ಕಾಲ ನಾಗರೀಕ ಬಂದೂಕು ತರಬೇತಿಯನ್ನು ಒಳಾಂಗಣ ಮತ್ತು ಹೊರಾಂಗಣ ತರಗತಿಗಳ ಮೂಲಕ ನೀಡಲಾಗುತ್ತಿತ್ತು.
ಕೆಜಿಎಫ್ ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಡಿಸಿದ್ದ ನಾಗರೀಕ ಬಂದೂಕು ತರಬೇತಿಯಲ್ಲಿ ವರ್ತಕರು, ನಾಗರೀಕರು ,ಮಹಿಳೆಯರು, ಯುವಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಂದೂಕು ತರಬೇತಿಯನ್ನು ಪಡೆದರು. ತರಬೇತಿ ಪೂರೈಸಿದವರಿಗೆ ಎಸ್‌ಪಿ ಶಾಂತರಾಜು ಅವರು ಪ್ರಮಾಣಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ವಿ.ಎಲ್.ರಮೇಶ್, ವೃತ್ತ ನಿರೀಕ್ಷಕ ಎಸ್.ಟಿ.ಮಾಕೋಂಡಯ್ಯ, ಆರ್‍ಟಐ ವಿ.ಸೋಮಶೇಖರ್ ಉಪಸ್ಥಿತರಿದ್ದರು.