ನಾಗರೀಕರು ಪೊಲೀಸರಿಗೆ ಸಹಕರಿಸಿ- ಶಶಿರಾಜ

ರಾಯಚೂರು,ಡಿ.೭-ನಾಗರೀಕರು ಪೊಲೀಸರಿಗೆ ಸಹಕರಿಸುವ ಮೂಲಕ ಬಡಾವಣೆಯಲ್ಲಿ ಪಡ್ಡೆ ಹುಡುಗರ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ವಾರ್ಡ್ ನಂ.೧೭ರ ನಗರಸಭೆ ಸದಸ್ಯ ಈ.ಶಶಿರಾಜ ಹೇಳಿದರು.
ಅವರು ಸೋಮವಾರ ಗಾಜಗಾರಪೇಟೆಯ ಬಸವಣ್ಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೊಲೀಸರು ಮತ್ತು ಬಡಾವಣೆ ನಾಗರೀಕರ ಅಹವಾಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚೆಗೆ ನಮ್ಮ ವಾರ್ಡಿನಲ್ಲಿ ಪಡ್ಡೆ ಹುಡುಗರ ಹಾವಳಿ ಮತ್ತು ಅಹಿತಕರ ಘಟನೆ ನಡೆಯುತ್ತಿರುವ ಬಗ್ಗೆ ದೂರು ಹಿನ್ನಲೆ ಸಭೆ ಕರೆಯಲಾಗಿದ್ದು ನಾಗರೀಕರು ಯಾವುದೆ ಹಿಂಜರಕೆಯಿಲ್ಲದೆ ಸಭೆಯಲ್ಲಿ ತಮ್ಮ ಅಳಲು ತೋಡಿಕೊಳ್ಳಬಹುದೆಂದರು. ನೇತಾಜಿ ನಗರ ಪೊಲೀಸ್ ಠಾಣೆ ಪಿಎಸ್‌ಐ ಬಸವರಾಜ ನಾಯಕ ಮಾತನಾಡಿ ನಿಮ್ಮ ಬಡಾವಣೆಯಲ್ಲಿ ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳು ನಡೆಯುತ್ತಿರುವ ಬಗ್ಗೆ ಮಾಧ್ಯಮದಲ್ಲಿ ಬಂದ ವರದಿ ಹಾಗೂ ನಾಗರೀಕರ ದೂರಿನ ಹಿನ್ನಲೆ ನಿಮ್ಮ ಬಳಿ ಬಂದಿದ್ದು ಜನಸ್ನೇಹಿ ಪೊಲೀಸ್ ಸೇವೆ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದ ಅವರು ನಿಮ್ಮ ಬಡಾವಣೆಯಲ್ಲಿ ಅಹಿತಕರ ಘಟನೆಗೆ ಕಾರಣರಾದವರ ಮತ್ತು ಕುಮ್ಮಕ್ಕು ನೀಡುವವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸುತ್ತೇವೆಂದರು.
ಪತ್ರಕರ್ತ ಜಯಕುಮಾರ ದೇಸಾಯಿ ಕಾಡ್ಲೂರು ಮಾತನಾಡಿ ನಮ್ಮ ಬಡಾವಣೆಯು ಅತ್ಯಂತ ಶಾಂತಿ ಮತ್ತು ಸಹ ಬಾಳ್ವೆಗೆ ಹೆಸರುವಾಸಿಯಾಗಿರುವ ಪ್ರದೇಶವಾಗಿದ್ದು ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳಿಂದ ನಾಗರೀಕರಿಗೆ ಆದ ಆತಂಕ ದೂರ ಮಾಡಲು ಪೊಲೀಸರು ಆತ್ಮ ಸ್ಥೈರ್ಯ ಹೇಳಲು ಬಂದಿದ್ದು ಎಲ್ಲ ನಾಗರೀಕರು ಅವರಿಗೆ ಕೈಜೋಡಿಸೋಣವೆಂದರು. ಮಹಿಳೆಯರು ಸೇರಿದಂತೆ ಅನೇಕರು ಅಹವಾಲು ಹೇಳಿದರು. ಈ ಸಂದರ್ಭದಲ್ಲಿ ಬಡಾವಣೆ ನಾಗರೀಕರಾದ ನಾರಾಯಣ, ಆನಂದ, ಗುರುರಾಜ ಗಜೇಂದ್ರಗಡ,ಕೃಷ್ಣ ,ಯುವರಾಜ, ಹನುಮೇಶ, ಗಣೇಶ ,ಶಂಕರ ಸೇರಿದಂತೆ ಅನೇಕರಿದ್ದರು.