ನಾಗರಿಕರ ಹತ್ಯೆ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ: ಶಾ

ನವದೆಹಲಿ, ಡಿ.6-ನಾಗಾಲ್ಯಾಂಡ್‌ನಲ್ಲಿ ಸೇನೆಯಿಂದ ನಾಗರಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು‌ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಇಂದು ಹೇಳಿಕೆ ನೀಡಿರುವ ಅವರು, ಘಟನೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ನಾಗರಿಕರ ಸಾವಿಗೆ ಸೇನೆ ವಿಷಾದ ವ್ಯಕ್ತಪಡಿಸಿದೆ ಎಂದು ಹೇಳಿದರು.

ಗೃಹ ಇಲಾಖೆ, ನಾಗಾಲ್ಯಾಂಡ್ ಸರ್ಕಾರದ ಜತೆ ಸಂಪರ್ಕದಲ್ಲಿದೆ. ನಾಗಾಲ್ಯಾಂಡ್ ರಾಜ್ಯಪಾಲ, ಮುಖ್ಯಮಂತ್ರಿಗಳ ಸಂಪರ್ಕದಲ್ಲಿದ್ದೇನೆ. ನಿನ್ನೆ ಇಡೀ ದಿನ ನಾನು ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ತಪ್ಪು ಮಾಹಿತಿಯಿಂದ ಇಂತಹ ದುರ್ಘಟನೆ ಸಂಭವಿಸಿದೆ ಎಂದು ವಿವರಿಸಿದರು.

ಮೃತರ ಕುಟುಂಬಸ್ಥರನ್ನು ಸಂಪರ್ಕಿಸುವ ಕೆಲಸ ಮಾಡಿದ್ದೇವೆ. ಉಗ್ರರ ಚಲನವಲನದ ಬಗ್ಗೆ ಸೇನೆಗೆ ಮಾಹಿತಿ ಸಿಕ್ಕಿತ್ತು. 21 ಕಮಾಂಡೋಗಳು ಶಂಕಿತ ಪ್ರದೇಶದಲ್ಲಿ ಕಾದು ಕುಳಿತಿದ್ದರು. ಶಂಕಿತ ವಾಹನ ಅಲ್ಲಿ ಬಂದಾಗ ನಿಲ್ಲಿಸಲು ಸೂಚಿಸಿದ್ದರು. ವಾಹನ ನಿಲ್ಲಿಸುವಂತೆ ಕಮಾಂಡೋಗಳು ಸೂಚಿಸಿದ್ದರು. ಆದರೆ ವಾಹನದಲ್ಲಿದ್ದವರು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಉಗ್ರರನ್ನು ಹೊತ್ತೊಯ್ಯುತ್ತಿದ್ದಾರೆ ಎಂಬ ಶಂಕೆ ಮೇಲೆ ದಾಳಿ ಮಾಡಲಾಗಿದೆ. ಶಂಕೆ ಮೇಲೆ ವಾಹನದ ಮೇಲೆ ಗುಂಡಿನ ದಾಳಿ ಮಾಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ದಾಳಿ ವೇಳೆ ವಾಹನದಲ್ಲಿದ್ದ 8 ಜನರಲ್ಲಿ 6 ಜನ ಮೃತಪಟ್ಟಿದ್ದಾರೆ. ತಪ್ಪು ಮಾಹಿತಿಯಿಂದ ಘಟನೆ ನಡೆದಿದ್ದು ಸೇನೆಗೆ ಗೊತ್ತಾಗಿದೆ. ಗಾಯಗೊಂಡ ಇಬ್ಬರಿಗೆ ಯೋಧರು ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಸುದ್ದಿ ತಿಳಿದು ಸ್ಥಳೀಯರು ಸೇನೆ ಸುತ್ತುವರಿದಿದ್ದಾರೆ. ಆಕ್ರೋಶದಿಂದ ಸ್ಥಳೀಯರು 2 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಸೈನಿಕರ ಮೇಲೆ ದಾಳಿ ಮಾಡಿದ್ದಾರೆ ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಭದ್ರತಾ ಪಡೆ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇತರ ಹಲವು ಯೋಧರು ಗಾಯಗೊಂಡಿದ್ದಾರೆ. ಆತ್ಮರಕ್ಷಣೆ, ಗುಂಪು ಚದುರಿಸಲು ಭದ್ರತಾ ಪಡೆಗಳಿಂದ ದಾಳಿ ಮಾಡಲಾಗಿದೆ. ಇದು ಇನ್ನೂ 7 ನಾಗರಿಕರ ಸಾವಿಗೆ ಕಾರಣವಾಯಿತು ಎಂದರು.

ಪ್ರಸ್ತುತ ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ಈಗ ನಿಯಂತ್ರಣದಲ್ಲಿದೆ. ನಾಗಾಲ್ಯಾಂಡ್ ಡಿಜಿಪಿ, ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನೆ ಸಂಬಂಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ತನಿಖೆ ಹಸ್ತಾಂತರ ಮಾಡಲಾಗಿದೆ. ರಾಜ್ಯ ಅಪರಾಧ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು SITಗೆ ನಿರ್ದೇಶನ ನೀಡಲಾಗಿದೆ.ಎಂದು ತಿಳಿಸಿದರು.

ಅಮಿತ್ ಶಾ ವಿವರಣೆ ವೇಳೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ ಲೋಕಸಭೆಯಲ್ಲಿ ಗದ್ದಲವೆಬ್ಬಿಸಿದ್ದರಿಂದ ಕಲಾಪವನ್ನು ಸ್ಪೀಕರ್ ನಾಳೆಗೆ ಮುಂದೂಡಿದರು..