ನಾಗರಿಕರ ಸ್ಥಳಾಂತರಕ್ಕೆ ಉಕ್ರೇನ್ ಆದೇಶ

ಕೀವ್ (ಉಕ್ರೇನ್), ಆ.೧೧- ರಷ್ಯಾ ತನ್ನ ದಾಳಿಯನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ ಇದೀಗ ಈಶಾನ್ಯ ಭಾಗದ ಕುಪಿಯಾನ್ಸ್ಕ್‌ನ ೩೭ ವಸಾಹತುಗಳಲ್ಲಿ ಉಕ್ರೇನ್ ತನ್ನ ಎಲ್ಲಾ ನಾಗರಿಕರನ್ನು ಕಡ್ಡಾಯವಾಗಿ ಸ್ಥಳಾಂತರಿಸಲು ಆದೇಶಿಸಿದೆ.
ಇಲ್ಲಿನ ಪ್ರದೇಶಗಳಲ್ಲಿ ರಷ್ಯಾ ನಿರಂತರವಾಗಿ ಭೀಕರ ದಾಳಿ ನಡೆಸುತ್ತಿದ್ದು, ಹಾಗಾಗಿ ಖಾರ್ಕಿವ್ ಪ್ರದೇಶದ ಕುಪಿಯಾನ್ಸ್ಕ್ ಜಿಲ್ಲೆಯ ಅಧಿಕಾರಿಗಳು ಇಲ್ಲಿ ಕೆಲಸ ನಿರ್ವಹಿಸಬೇಕಾಯಿತು ಎಂದು ತಿಳಿಸಿದ್ದಾರೆ. ಶೆಲ್ ದಾಳಿಯಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಒಂದೆಡೆ ಇಲ್ಲಿನ ಪ್ರದೇಶಗಳಲ್ಲಿ ಸ್ವಲ್ಪ ಮುನ್ನಡೆ ಸಾಧಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡಿದ್ದರೆ ಮತ್ತೊಂದೆಡೆ ಉಕ್ರೇನ್ ಎದುರಾಳಿಗಳ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ ಎಂದು ವಾದಿಸಿದೆ. ಎರಡು ಪಟ್ಟಣಗಳ ಮತ್ತು ೩೫ ಹಳ್ಳಿಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಕುಪಿಯಾನ್ಸ್ಕ್ ಜಿಲ್ಲೆಯ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಿಮ್ಮ ಸುರಕ್ಷತೆ ಮತ್ತು ನಿಮ್ಮ ಪ್ರೀತಿಪಾತ್ರರ ಸುರಕ್ಷತೆಯನ್ನು ನಿರ್ಲಕ್ಷಿಸಬೇಡಿ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಗರಿಕರನ್ನು ಉಕ್ರೇನ್‌ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ಹೇಳಿದರು. ಇನ್ನು ಗುರುವಾರ ಸಂಜೆ ಕುಪಿಯಾನ್ಸ್ಕ್ ಜಿಲ್ಲೆಯ ಪೊಡೊಲಿ ಗ್ರಾಮದಲ್ಲಿ ರಷ್ಯಾದ ಶೆಲ್ ಒಂದು ಮನೆಯೊಂದಕ್ಕೆ ಅಪ್ಪಳಿಸಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ಕುಪಿಯಾನ್ಸ್ಕ್ ಪ್ರದೇಶವು ಪ್ರಮುಖ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಪ್ರಾದೇಶಿಕ ಕೇಂದ್ರವಾಗಿದ್ದು, ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ರಷ್ಯಾ ಎಲ್ಲಾ ರೀತಿಯ ಹೋರಾಟ ಮುಂದುವರೆಸಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ರಷ್ಯಾ ದಾಳಿ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದು, ಆದರೆ ಉಕ್ರೇನ್ ತೀವ್ರ ಪ್ರತಿರೋಧದ ದಾಳಿಯ ಮೂಲಕ ಇದನ್ನು ಮರುವಶಕ್ಕೆ ಪಡೆದುಕೊಂಡಿತ್ತು.