ನಾಗರಿಕರ ಸಾವು-ನೋವು ತಡೆಯಲು ಇಸ್ರೇಲ್ ಪ್ರಯತ್ನ

ಟೆಲ್ ಅವೀವ್ (ಇಸ್ರೇಲ್), ಅ.೧೯- ಗಾಜಾದಲ್ಲಿ ನಡೆಯುತ್ತಿರುವ ಯುದ್ಧವು ಹಮಾಸ್ ತಂತ್ರಗಳಿಂದಾಗಿ ಸವಾಲಾಗಿದ್ದು ಗಾಜಾ ಯುದ್ಧದಲ್ಲಿ ನಾಗರಿಕರ ಸಾವು ನೋವುಗಳನ್ನು ತಪ್ಪಿಸಲು ಇಸ್ರೇಲ್ ಪ್ರಯತ್ನಿಸುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನ್ಯಾಹು ಹೇಳಿದ್ದಾರೆ.
ಇಸ್ರೇಲ್‌ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಬೈಡನ್ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದ ನೆತನ್ಯಾಹು, ಹಮಾಸ್ ವಿಭಿನ್ನ ರೀತಿಯ ಶತ್ರುವಾದ್ದರಿಂದ ಇದು ವಿಭಿನ್ನ ರೀತಿಯ ಯುದ್ಧವಾಗಿದೆ. ಈ ಯುದ್ಧದಲ್ಲಿ ನಾವು ಮುಂದುವರಿದಂತೆಲ್ಲಾ, ನಾಗರಿಕರನ್ನು ಅಪಾಯದ ವ್ಯಾಪ್ತಿಯಿಂದ ದೂರ ಇರಿಸಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡಲಿದ್ದೇವೆ’ ಎಂದರು. ಈ ವೇಳೆ ಮಾತನಾಡಿದ ಬೈಡನ್, ಇಸ್ರೇಲ್ ನೆಲದ ಮೇಲೆ ದಾಳಿ ನಡೆಸಿದ ಹಮಾಸ್ ವಿರುದ್ಧ ಹೋರಾಟ ನಡೆಸಲು ಇಸ್ರೇಲ್‌ಗೆ ಎಲ್ಲಾ ರೀತಿಯಲ್ಲಿ ಹಕ್ಕಿದೆ. ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿಲ್ಲ. ನಾಗರಿಕರ ಸಾವು-ನೋವುಗನ್ನು ತಡೆಯಲು ಇಸ್ರೇಲ್ ಅಮೆರಿಕದೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದರು. ‘ನಿಮ್ಮ ಜನರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ನಿಮಗೆ ಅಮೆರಿಕದ ಬೆಂಬಲ ಮುಂದುವರಿಯಲಿದೆ. ಈ ಪ್ರದೇಶದಾದ್ಯಂತ ಅಮಾಯಕ ನಾಗರಿಕರಿಗೆ ಇನ್ನಷ್ಟು ದುರಂತ ತಪ್ಪಿಸಲು ಅಮೆರಿಕ ಬದ್ಧವಾಗಿದೆ’ ಎಂದು ಇಸ್ರೇಲ್ ಮುಖಂಡರನ್ನು ಉದ್ದೇಶಿಸಿ ಬೈಡನ್ ಹೇಳಿದ್ದಾರೆ. ಇನ್ನು ಗಾಜಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ನಡೆದ ಸ್ಫೋಟದಲ್ಲಿ ೪೭೧ ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಒಂದೆಡೆ ಆಸ್ಪತ್ರೆ ಮೇಲಿನ ದಾಳಿಗೆ ಇಸ್ರೇಲ್ ಕಾರಣ ಎಂಬ ಹಮಾಸ್ ಆರೋಪಿಸುತ್ತಿದ್ದರೆ ಅತ್ತ ಹಮಾಸ್‌ನ ಕ್ಷಿಪಣಿ ವೈಫಲ್ಯದಿಂದ ಆಸ್ಪತ್ರೆ ಧ್ವಂಸಗೊಂಡಿದೆ ಎಂದು ಇಸ್ರೇಲ್ ಪ್ರತ್ಯಾರೋಪ ಮಾಡಿದೆ. ಅದೂ ಅಲ್ಲದೆ ಹಮಾಸ್ ಕ್ಷಿಪಣಿಯಿಂದಲೇ ಆಸ್ಪತ್ರೆ ಧ್ವಂಸಗೊಂಡಿದೆ ಎಂಬುದರ ಬಗ್ಗೆ ಇಸ್ರೇಲ್ ಸಾಕ್ಷಿ ಸಹಿತ ಪುರಾವೆ ಒದಗಿಸಿದೆ. ಗಾಜಾದಲ್ಲಿ ಇದುವರೆಗೆ ಸುಮಾರು ೩೦೦೦ ಸಾವಿರ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಅದೂ ಅಲ್ಲದೆ ೧೦ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಹಮಾಸ್ ವಶದಲ್ಲಿರುವ ತಮ್ಮ ದೇಶದ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಯಾವುದೇ ನೆರವನ್ನು ತನ್ನದೇ ಪ್ರದೇಶದ ಮೂಲಕ ಹಾದುಹೋಗಲು ಅನುಮತಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಸುಮಾರು ಇಸ್ರೇಲ್‌ನ ೨೦೦ ಜನರನ್ನು ಅಪಹರಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಗಾಜಾಗೆ ೧೦೦ ಮಿಲಿಯನ್ ಡಾಲರ್ ನೆರವು ಘೋಷಣೆ
ಗಾಝಾ ನಗರದ ಆಸ್ಪತ್ರೆಯ ಮೇಲಿನ ದಾಳಿಯನ್ನು ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಖಂಡಿಸಿದ್ದು, ಈ ನಡುವೆ ೧೦೦ ಮಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ. ಇಸ್ರೇಲ್‌ಗೆ ಭೇಟಿ ನೀಡಿರುವ ಅಮೇರಿಕಾ ಅಧ್ಯಕ್ಷರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಮಾನವೀಯ ನೆಲೆಯ ಸಹಾಯ ಎಂದು ಹೇಳಿದ್ದಾರೆ. ನಾನು ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ಮಾನವೀಯ ಸಹಾಯಕ್ಕಾಗಿ ೧೦೦ ಮಿಲಿಯನ್ ಡಾಲರ್ ನೆರವು ಘೋಷಿಸಿದ್ದೇನೆ. ಈ ಹಣವು ೧ ಮಿಲಿಯನ್‌ಗಿಂತಲೂ ಹೆಚ್ಚಿರುವ ಸಂಘರ್ಷ-ಪೀಡಿತ, ಸ್ಥಳಾಂತರಗೊಂಡ ಫ್ಯಾಲೆಸ್ತೀನಿಯನ್ನರ ಸಹಾಯಕ್ಕಾಗಿ. ಈ ನೆರವು ಹಮಾಸ್ ಅಥವಾ ಇನ್ಯಾರಿಗೋ ಅಲ್ಲ. ಈ ನೆರವು ಅಗತ್ಯವಿರುವವರಿಗೆ ತಲುಪುತ್ತದೆ. ಅರ್ಹರಿಗೆ ತಲುಪಿಸಲು ಬೇಕಾದ ವ್ಯವಸ್ಥೆ ನಮ್ಮಲ್ಲಿದೆ ಎಂದು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಈಜಿಪ್ಟ್ ಜೊತೆ ಅಮೆರಿಕಾ ಒಪ್ಪಂದ
ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಮಾನವೀಯ ಬಿಕ್ಕಟ್ಟನ್ನು ಉದ್ಬವಿಸಿದ್ದು, ಇದನ್ನು ನಿವಾರಿಸುವ ನಿಟ್ಟಿಯಲ್ಲಿ ಗಾಜಾಗೆ ಸೀಮಿತ ನೆರವು ನೀಡಲು ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಈಜಿಪ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇಸ್ರೇಲ್ ಭೇಟಿಯಲ್ಲೇ ಈಜಿಪ್ಟ್ ಅಧ್ಯಕ್ಷ ಫತೇಹ್ ಅಲ್ ಸಿಸಿ ಜೊತೆ ಫೋನ್ ಮೂಲಕ ಬೈಡೆನ್ ಮಾತನಾಡಿದರು. ಬಳಿಕ ತಿಳಿಸಿದ ಬೈಡೆನ್, ಗಾಝಾ ಭೂಪ್ರದೇಶಕ್ಕೆ ಮಾನವೀಯ ನೆರವು ಸಾಗಿಸುವ ಸುಮಾರು ೨೦ ಲಾರಿಗಳನ್ನು ಅನುಮತಿಸಲು ಈಜಿಪ್ಟ್‌ನಿಂದ ಗಾಜಾಕ್ಕೆ ರಫಾ ಕ್ರಾಸಿಂಗ್ ಅನ್ನು ತೆರೆಯಲು ಸಿಸಿ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಆದರೆ ರಫಾ ಕ್ರಾಸಿಂಗ್ ಯಾವಾಗ ತೆರೆಯಲಿದೆ ಎಂಬುದು ಇನ್ನೂ ಅಧಿಕೃತವಾಗಿಲ್ಲ. ಮೂಲಗಳ ಪ್ರಕಾರ ಇಲ್ಲಿನ ರಸ್ತೆಯ ಪುನರ್‌ನವೀಕರಣ ಕಾಮಗಾರಿ ಬಳಿಕ ಕ್ರಾಸಿಂಗ್ ತೆರೆಯಲಿದೆ ಎನ್ನಲಾಗಿದೆ.

ಬಾಕ್ಸ್
ನಾಳೆ ಇಸ್ರೇಲ್‌ಗೆ ಸುನಕ್ ಭೇಟಿ
ಈಗಾಗಲೇ ಇಸ್ರೇಲ್ ಜೊತೆ ಸದೃಢತೆ ಪ್ರದರ್ಶಿಸುವ ನಿಟ್ಟಿನಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಈಗಾಗಲೇ ಇಸ್ರೇಲ್ ಭೇಟಿ ನೀಡಿದ್ದು, ಇದೀಗ ಇಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ. ಗುರುವಾರ ಸುನಕ್ ಅವರು ಇಸ್ರೇಲ್‌ಗೆ ಭೇಟಿ ನೀಡಲಿದ್ದು, ಬಳಿಕ ಅಲ್ಲಿಂದ ಮಧ್ಯಪ್ರಾಚ್ಯದ ಇತರೆ ರಾಷ್ಟ್ರಗಳಿಗೂ ಭೇಟಿ ನೀಡಿ, ಸಮರ ಇತರೆ ಪ್ರದೇಶಗಳತ್ತ ವಿಸ್ತರಿಸದಂತೆ ಹಲವು ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಗುರುವಾರ ಮುಂಜಾನೆ ಸುನಕ್ ಇಸ್ರೇಲ್ ತಲುಪುವ ಸಾಧ್ಯತೆ ಇದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರನ್ನು ಭೇಟಿಯಾಗಲಿದ್ದಾರೆ. ಅತ್ತ ಸುನಕ್‌ರ ಪ್ರವಾಸದ ಜೊತೆಗೆ ಅವರ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರು ಈಜಿಪ್ಟ್, ಟರ್ಕಿ ಮತ್ತು ಕತಾರ್‌ಗೆ ಮುಂದಿನ ದಿನಗಳಲ್ಲಿ ಭೇಟಿ ನೀಡಲಿದ್ದಾರೆ.