ನಾಗರಾಜು, ಸಂತೋಷ್ ಕಶ್ಯಪ್‍ಗೆ ಬಿಳ್ಕೊಡುಗೆ ಕಾರ್ಯಕ್ರಮ

ಹನೂರು: ಜೂ.07: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಆಗಿ, ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಪಡೆದ ಪೊಲೀಸರಿಗೆ ಹಾಗೂ ವಯೋ ನಿವೃತ್ತಿ ಹೊಂದಿದ ಎಎಸ್‍ಐ ಅವರಿಗೆ ಡಿವೈಎಸ್‍ಪಿ ನಾಗರಾಜು ಹಾಗೂ ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಹಾಗೂ ಠಾಣೆಯ ಪೊಲೀಸರ ವತಿಯಿಂದ ಬಿಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪಿಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಶ್ ಅವರು ಚನ್ನಪಟ್ಟಣ ತರಬೇತಿ ಶಾಲೆಗೆವರ್ಗಾವಣೆಗೊಂಡರೆ, ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಾದಪ್ಪ ಅವರು ಎಎಸ್‍ಐ ಆಗಿ ಮುಂಬಡ್ತಿ ಪಡೆದು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು. ಇದೇ ಠಾಣೆಯಲ್ಲಿ ಎಎಸ್‍ಐ ಆಗಿದ್ದ ತೋಟದಾರ್ಯಸ್ವಾಮಿ ಅವರು ವಯೋವೃತ್ತಿ ಹೊಂದಿದ ಹಿನ್ನಲೆಯಲ್ಲಿ ಮೂವರು ಪೊಲೀಸರಿಗೆ ಅರ್ಥಪೂರ್ಣವಾಗಿ ಠಾಣಾ ವತಿಯಿಂದ ಗೌರವಿಸಿ ಬಿಳ್ಕೊಡಲಾಯಿತು.
ಈ ವೇಳೆ ಡಿವೈಎಸ್‍ಪಿ ನಾಗರಾಜು ಮಾತನಾಡಿ, ಮುಂಬಡ್ತಿ ಪಡೆದು ಬೇರೆ ಠಾಣೆಗೆ ವರ್ಗಾವಣೆಗೊಂಡ ಹಾಗೂ ವಯೋವೃತ್ತಿ ಹೊಂದಿ ವೃತ್ತಿಗೆ ವಿದಾಯ ಹೇಳಿದ ಪೊಲೀಸರ ಮುಂದಿನ ಜೀವನ ಸುಖಕರವಾಗಿರಲೆಂದು ಆಶಿಸಿದರು. ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಅವರು ತಮ್ಮ ಅವಧಿಯಲ್ಲಿ ತಮ್ಮೊಡನೆ ಕರ್ತವ್ಯ ನಿರ್ವಹಿಸಿದ ಪಿಎಸ್‍ಐ ನಾಗೇಶ್, ಎಎಸ್‍ಐ ಗಳಾದ ತೋಟದಾರ್ಯಸ್ವಾಮಿ, ಮಾದಪ್ಪ ಅವರ ಕಾರ್ಯವೈಖರಿ ಮತ್ತು ಒಡನಾಟದ ಬಗ್ಗೆ ಸ್ಮರಿಸಿದರು.
ಕಾರ್ಯಕ್ರಮದ ಅಂಗವಾಗಿ ಪ್ರಾರ್ಥನೆ ಮತ್ತು ನಿರೂಪಣೆಯನ್ನು ಮುಖ್ಯಪೇದೆ ರಾಮದಾಸ್ ಹಾಗೂ ಸ್ವಾಗತ ಮತ್ತು ವಂದನಾರ್ಪಣೆಯನ್ನು ಹೆಚ್.ಸಿ.ಗೋಪಾಲ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಠಾಣೆಯ ಇನ್ನಿತರೆ ಎಎಸ್‍ಐ ಗಳು, ಮುಖ್ಯ ಪೇದೆಗಳು, ಪೇದೆಗಳು ಉಪಸ್ಥಿತರಿದ್ದರು.