ನಾಗರಾಜಯಾದವ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ

ಕೋಲಾರ,ಮೇ,೧೮:ಯಾದವ ಸಮುದಾಯದ ನೇತಾರರಾಗಿ ಇಡೀ ರಾಜ್ಯದಲ್ಲಿ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಪ್ರಚಾರ ನಡೆಸಿದ ವಿಧಾನಪರಿಷತ್ ಸದಸ್ಯ ನಾಗರಾಜಯಾದವ್ ಅವರಿಗೆ ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಹಿಂದುಳಿದ ಸಮುದಾಯದ ಕೈಹಿಡಿಯಬೇಕು ಎಂದು ಜಿಲ್ಲಾ ಯಾದವ ಸಮುದಾಯದ ಜಿಲ್ಲಾಧ್ಯಕ್ಷ ವಕ್ಕಲೇರಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ನಾಗರಾಜ ಯಾದವ್ ಅವರಿಗೆ ಕಾಂಗ್ರೆಸ್ ಪಕ್ಷ ವಿಧಾನಪರಿಷತ್ ಸ್ಥಾನ ನೀಡುವ ಮೂಲಕ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದು, ಅವರೂ ಸಹಾ ಪಕ್ಷನಿಷ್ಟೇಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಯಾದವ ಸಮುದಾಯದ ಮತಗಳು ಬೇರೆ ಪಕ್ಷಗಳಿಗೆ ಹೋಗದಂತೆ ಸಂಘಟಿತ ಪ್ರಯತ್ನ ನಡೆಸಿರುವ ನಾಗರಾಜಯಾದವ್ ಅವರು, ಕೋಲಾರ ಜಿಲ್ಲೆಯ ಎಲ್ಲಾ ಆರು ವಿಧಾನಸಭಾ ಕ್ಷೇತ್ರಗಳಲ್ಲೂ ಸಮುದಾಯವನ್ನು ಒಗ್ಗೂಡಿಸಿ ಕಾಂಗ್ರೆಸ್ ಬೆಂಬಲಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಯಾದವ ಸಮುದಾಯವೂ ಪ್ರಮುಖ ಪಾತ್ರ ವಹಿಸಿದೆ, ಕೋಲಾರ ಜಿಲ್ಲೆ ಮಾತ್ರವಲ್ಲದೇ ನಾಗರಾಜ ಯಾದವ್ ಅವರು ಇಡೀ ರಾಜ್ಯದಲ್ಲಿನ ಯಾದವ ಸಮುದಾಯವನ್ನು ಕಾಂಗ್ರೆಸ್ ಬೆಂಬಲಿಸುವಂತೆ ಮಾಡುವಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಶೈಕ್ಷಣಿಕ,ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಯಾದವ ಸಮುದಾಯಕ್ಕೆ ನಾಯಕತ್ವದ ಕೊರತೆ ಇದ್ದು, ಅದನ್ನು ಪೂರೈಸಲು ವಿಧಾನಪರಿಷತ್ ಸದಸ್ಯರೂ ಆಗಿರುವ ನಾಗರಾಜ ಯಾದವ್ ಅವರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.
ಯಾದವ ಸಮುದಾಯಕ್ಕೆ ರಾಜಕೀಯವಾಗಿ ಸೂಕ್ತ ಸ್ಥಾನ ನೀಡುವಲ್ಲಿ ಕಾಂಗ್ರೆಸ್ ಪಕ್ಷ ಸಹಕಾರ ನೀಡಿದೆ, ಇದೀಗ ಕಾಂಗ್ರೆಸ್‌ಗೆ ಭರ್ಜರಿ ಬಹುಮತ ಬಂದಿದ್ದು, ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಯಾರೇ ಮುಖ್ಯಮಂತ್ರಿಗಳಾಗಲಿ ನಾಗರಾಜ ಯಾದವ್‌ಅವರಿಗೆ ಸಂಪುಟದಲ್ಲಿ ಸ್ಥಾನನೀಡಲಿ ಎಂದು ಮನವಿ ಮಾಡಿದ್ದಾರೆ.